Read - < 1 minute
ಇಸ್ಲಾಮಾಬಾದ್: ಕೇರಳದ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಟೀಕಿಸಿದ ಹೊರತಾಗಿಯೂ , ಪಾಕಿಸ್ಥಾನದಲ್ಲಿ ಇಷ್ಟರಲ್ಲೇ ಅದರ ಪರಿಣಾಮ ತಟ್ಟಲಾರಂಭಿಸಿದೆ. ಪಾಕಿಸ್ಥಾನದಲ್ಲಿ ಮೋದಿ ಭಾಷಣ ಭಾರೀ ಸಂಚಲನ ಸೃಷ್ಟಿಸಿದ್ದು, ಇದು ಅಲ್ಲಿನ ಮಾಧ್ಯಮಗಳಲ್ಲೂ ವ್ಯಕ್ತವಾಗಿದೆ. ಪಾಕ್ ಸರಕಾರ ಕೂಡಾ ಮೋದಿ ಭಾಷಣದಿಂದ ವಿಚಲಿತವಾಗಿದ್ದು, ಮೋದಿಯವರ ಭಾಷಣ `ಬೇಜವಾಬ್ದಾರಿಯುತ ನಡವಳಿಕೆ ‘ಎಂದಿದೆ.ಅಲ್ಲದೆ ತಾನು ಭಯೋತ್ಪಾದನೆಯನ್ನು ರಫ್ತು ಮಾಡುತ್ತಿರುವುದಾಗಿ ಮೋದಿಯವರು ಮಾಡಿದ ಆರೋಪ ತನಗೆ ಕಳಂಕ ತರುವ `ಯೋಜನಾಬದ್ಧ ನಿಂದಾ ಅಭಿಯಾನ ‘ಎಂದೂ ಅದು ಪ್ರತ್ಯಾರೋಪ ಮಾಡಿದೆ.
ಪ್ರಧಾನಿ ಮೋದಿಯವರು ಕೇರಳದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಡಿದ ಭಾಷಣ ಪಾಕಿಗೆ ಕಳಂಕ ಹಚ್ಚುವ ಯತ್ನ. ಇದು ಕಾಶ್ಮೀರದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಹತಾಶಾ ಯತ್ನ. ಪಾಕ್ ವಿರುದ್ಧ ಆಧಾರರಹಿತ ಆರೋಪಗಳು ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ವಿಷಾದನೀಯ ಎಂದೆಲ್ಲ ಪಾಕ್ ವಿದೇಶಾಂಗ ಕಚೇರಿ ಹೇಳಿಕೆ ಹೊರಡಿಸಿದೆ.
ಪಾಕ್ ಮಾಧ್ಯಮಗಳೂ ಕೂಡಾ ಕಲ್ಲಿಕೋಟೆಯಲ್ಲಿ ಮೋದಿಯವರು ಮಾಡಿದ ಭಾಷಣವನ್ನು ಹಗೆತನದ ಭಾಷಣ ಎಂದು ಟೀಕಿಸಿವೆ. ದಿ ನ್ಯೂಸ್, ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್, ಜಿಯೋ ನ್ಯೂಸ್ ಮುಂತಾದವು ಪಾಕನ್ನು ಏಕಾಂಗಿಯಾಗಿಸುವ ಮೋದಿ ಹೇಳಿಕೆ ಬೆದರಿಕೆಯಾಗಿದೆ ಎಂದು ದೂಷಿಸಿವೆ.
Discussion about this post