Read - < 1 minute
ಬೆಂಗಳೂರು, ಆ.31: ಸೆ.4 ಮತ್ತು 5ರಂದು ಗೌರಿ-ಗಣೇಶ ಹಬ್ಬವಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಬಿಬಿಎಂಪಿ ವತಿಯಿಂದ ಐತಿಹಾಸಿಕ ಯಡಿಯೂರು ಕೆರೆಯಲ್ಲಿ ಗಣೇಶ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸೆ.5ರಿಂದ 15 ದಿನಗಳವರೆಗೆ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ.
ನಗರದ ಅತ್ಯುತ್ತಮ ಗುಣಮಟ್ಟ ಹೊಂದಿರುವ ಕೆರೆಗಳಲ್ಲಿ ಯಡಿಯೂರು ಕೆರೆ ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ಇಲ್ಲಿ ಸುಮಾರು 120ಕ್ಕೂ ಹೆಚ್ಚು ಪ್ರಭೇದದ ವಿದೇಶಗಳಲ್ಲಿ ವಲಸೆ ಬರುವ ಪಕ್ಷಿಗಳು ಸಂತಾನಾಭಿವೃದ್ಧಿಗಾಗಿ ನೆಲೆಸುತ್ತವೆ.
ಹೆಚ್ಚು ಶಬ್ದ ಮಾಲಿನ್ಯವಾದರೆ ಮತ್ತು ಕೆರೆಯ ನೀರು ಮಲಿನಗೊಂಡರೆ ಈ ಪಕ್ಷಿಗಳು ಬೇರೆಡೆಗೆ ಹೋಗುವ ಸಾಧ್ಯತೆ ಇದೆ. ಹಾಗಾಗಿ ಕೆರೆಯ ಹಿತದೃಷ್ಟಿಯಿಂದ ಯಡಿಯೂರು ಕೆರೆಯ ಗಣೇಶ ಮೂರ್ತಿಗಳ ವಿಸರ್ಜನಾ ಕೊಳದಲ್ಲಿ ಸೆ.5ರಿಂದ 19ರ ವರೆಗೆ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಎಲ್ಲ ಸಿದ್ಧತೆ ನಡೆದಿದೆ.
20ರ ನಂತರ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶವಿರುವುದಿಲ್ಲ ಎಂದು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Discussion about this post