Read - < 1 minute
ನವದೆಹಲಿ, ಸೆ.2: ಸರಕು ಮತ್ತು ಸೇವಾ ತೆರಿಗೆ -ಜಿಎಸ್ ಟಿ ಜಾರಿ ಕುರಿತ ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿಮಸೂದೆಯನ್ನು ಈಗಾಗಲೇ 16 ರಾಜ್ಯಗಳು ಅನುಮೋದಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಸೂದೆಗೆ ರಾಷ್ಟ್ರಪತಿ ಅಂಕಿತ ಕೋರಲಿದೆ.
ಒಡಿಶಾದ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಮಸೂದೆಗೆ ಅನುಮೋದನೆ ದೊರೆತಿದೆ.ಇದರಿಂದಾಗಿ ಶೇಕಡ 50ರಷ್ಟು ರಾಜ್ಯಗಳು ಜಿಎಸ್ಟಿ ಮಸೂದೆಗೆ ಒಪ್ಪಿಗೆ ನೀಡಿದಂತಾಗಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ನಿಯಮದ ಪ್ರಕಾರ ಅಗತ್ಯವಿರುವ ರಾಜ್ಯಗಳು ಜಿಎಸ್ ಟಿ ಸಾಂವಿಧಾನಿಕ ಮಸೂದೆಯನ್ನು ಅನುಮೋದಿಸಿರುವ ಹಿನ್ನೆಲೆಯಲ್ಲಿ ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದ್ದಾರೆ.
ಕಂದಾಯ ಕಾರ್ಯದರ್ಶಿ ಹಷ್ಮುಖ್ ಅಧಿಯಾ, ನಿಗದಿತ ಅವಧಿಗೆ ಮುನ್ನವೇ ಜಿಎಸ್ ಟಿ ಜಾರಿಗೆಕೇಂದ್ರ ಸರ್ಕಾರ ಸಿದ್ಧವಿದೆ. ರಾಜ್ಯಗಳ ಅನುಮೋದನೆಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, 23 ದಿನಗಳಲ್ಲೇ 16 ರಾಜ್ಯಗಳು ಅನುಮೋದನೆ ನೀಡಿವೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಮಹತ್ವದ ಈ ಪರೋಕ್ಷ ತೆರಿಗೆ ಸುಧಾರಣಾ ಪದ್ಧತಿಯನ್ನು ಬರುವ ಏಪ್ರಿಲ್ ನಿಂದ ಜಾರಿಗೊಳಿಸಲು ಮುಂದಾಗಿದೆ. ಈ ಏಕರೂಪ ತೆರಿಗೆ ಪದ್ಧತಿಯಿಂದ ಸರಕುಗಳು ಮತ್ತು ಸೇವೆಗಳಿ ದೇಶದಲ್ಲೆಡೆ ಒಂದೇ ದರದಲ್ಲಿ ಲಭಿಸಲಿವೆ. ಸಂಸತ್ತಿನ ಉಭಯ ಸದನಗಳು ಕಳೆದ ತಿಂಗಳು ಅನುಮೋದಿಸಿರುವ ಜಿಎಸ್ ಟಿ ಮಸೂದೆಯನ್ನು 16 ರಾಜ್ಯಗಳು ಅನುಮೋದಿಸಿವೆ.
ಅವುಗಳಲ್ಲಿ ಬಿಹಾರ, ಜಾರ್ಖಂಡ್, ಛತ್ತೀಸ್ ಘಡ, ಹಿಮಾಲಚ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ನಾಗಲ್ಯಾಂಡ್, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯಗಳು ಸೇರಿವೆ. ರಾಷ್ಟ್ರಪತಿಗಳ ಅನುಮೋದನೆ ನಂತರ ಸರ್ಕಾರ ಜಿಎಸ್ ಟಿ ಮಂಡಳಿಯ ಕುರಿತು ಅಧಿಸೂಚನೆ ಹೊರಡಿಸಲಿದೆ.
Discussion about this post