ಬೆಂಗಳೂರು, ಅ.30: ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಎಲ್ಲಾ ಸಿದ್ಧತೆ ನಡೆಸಿಕೊಳ್ಳುತ್ತಿದೆ, ಈ ನಡುವೆ ಎಲ್ಲಾ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಕಾಂಗ್ರೆಸ್ ನವೆಂಬರ್ ಎರಡನೆ ವಾರ ನಂದಿ ಬೆಟ್ಟದಲ್ಲಿ ಮಹತ್ವದ ಸಭೆ ಆಯೋಜಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಧೋರಣೆಗಳ ಬಗ್ಗೆ ಮುನಿಸಿಕೊಂಡಿರುವ ಜಾಫರ್ ಶರೀಫ್, ಜನಾರ್ದನಪೂಜಾರಿ, ಎಂ.ವಿ. ರಾಜಶೇಖರನ್, ಎಸ್.ಎಂ. ಕೃಷ್ಣ, ಬಿ.ಕೆ. ಹರಿಪ್ರಸಾದ್ರಂತಹ ಹಿರಿಯ ನಾಯಕರು ಪದೇ ಪದೇ ಬಹಿರಂಗ ಹೇಳಿಕೆಗಳನ್ನು ನೀಡಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಒಡಕುಗಳೇ ಬಿಜೆಪಿ-ಜೆಡಿಎಸ್ ಗೆ ಲಾಭವಾಗುವ ಸಾಧ್ಯತೆ ಇರುವುದರಿಂದ ಇದಕ್ಕೆ ಕಡಿವಾಣ ಹಾಕಲು ಪಕ್ಷದ ಎಲ್ಲಾ ಹಿರಿಯ ನಾಯಕರ ಸಭೆ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರುಗಳು ಭಾಗವಹಿಸಿ ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಸಮಾಲೋಚಿಸುವ ಮೂಲಕ ಹಲವು ವರ್ಷಗಳಿಂದ ಮಡುಗಟ್ಟಿರುವ ಅಸಮಾಧಾನವನ್ನು ತಿಳಿಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಒಂದೆಡೆ ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ಹಿರಿಯ ನಾಯಕರು ಹಾಗೂ ಸಮಾಜದ ಖ್ಯಾತ ನಾಮರನ್ನು ಸೆಳೆದುಕೊಂಡು ಪಕ್ಷ ಬಲವರ್ಧನೆಗೆ ಪ್ರಯತ್ನಿಸುತ್ತಿದೆ. ಆದರೆ ಕಾಂಗ್ರೆಸ್ ಹೊಸದಾಗಿ ಬರುವ ನಾಯಕರಿಗೆ ಬ್ರೇಕ್ ಹಾಕಿ ತಮ್ಮಲ್ಲೇ ಇರುವ ಘಟಾನುಘಟಿ ನಾಯಕರನ್ನು ಒಂದೇ ವೇದಿಕೆಗೆ ಕರೆತಂದು ಒಗ್ಗಟ್ಟಿನ ಮಂತ್ರದೊಂದಿಗೆ ಚುನಾವಣೆಗೆ ಹೋಗುವ ತಯಾರಿ ನಡೆಸಿದೆ.
ಮತ್ತೊಮ್ಮೆ ಸಾಮೂಹಿಕ ನಾಯಕತ್ವದ ಜಪ:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದೊಂದಿಗೆ ಚುನಾವಣೆ ಎದುರಿಸಿ ಯಶಸ್ವಿಯಾದ ಕಾಂಗ್ರೆಸ್ ಈ ಬಾರಿಯೂ ಅದೇ ಜಪವನ್ನು ಮುಂದುವರೆಸಿದೆ. ಆದರೆ ಮುಂದಾಳತ್ವಕ್ಕೆ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಅವರನ್ನೇ ಹೈಕಮಾಂಡ್ ಅಣಿಗೊಳಿಸಿದೆ.
ಪರಮೇಶ್ವರ್ ಅವರು ದಲಿತ ಮುಖ್ಯಮಂತ್ರಿ ಚರ್ಚೆಯನ್ನು ಹುಟ್ಟುಹಾಕಿದಾಗ ಸ್ಪಷ್ಟೀಕರಣ ನೀಡಿದ ಸಿದ್ದರಾಮಯ್ಯ ಅವರು ಈ ಅವಧಿಗೆ ನಾನೇ ಮುಖ್ಯಮಂತ್ರಿ. ಮುಂದಿನ ಬಾರಿ ಕಾಂಗ್ರೆಸನ್ನು ಮರಳಿ ಅಧಿಕಾರಕ್ಕೆ ತಂದು ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಸೋಣ ಎಂದಿದ್ದರು.
ಬಹುತೇಕ ಕಾಂಗ್ರೆಸ್ ನಾಯಕರು ಮತ್ತು ಸಚಿವರು ಇದಕ್ಕೆ ದನಿಗೂಡಿಸಿದ್ದರು. ಹೀಗಾಗಿ ಪರಮೇಶ್ವರ್ ಅವರ ಬೇಡಿಕೆ ತಣ್ಣಗಾಗಿ ಗೃಹ ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಸಿದ್ದರಾಮಯ್ಯ ಅವರ ಜೊತೆ ಕೈ ಜೋಡಿಸಿದ್ದಾರೆ.
ಆದರೆ ಇತ್ತೀಚೆಗೆ ಮೈಸೂರಿನ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಚಿವ ರೋಷನ್ ಬೇಗ್ ಅವರು ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು ಭಾವಿ ಮುಖ್ಯಮಂತ್ರಿ ಎಂದು ಸಂಬೋಧಿಸಿರುವುದು ಕಾಂಗ್ರೆಸ್ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವಾಗಲೇ ಪ್ರಭಾವಿ ಸಚಿವ ರೋಷನ್ ಬೇಗ್ ಅವರು ಎಚ್.ಸಿ. ಮಹದೇವಪ್ಪ ಅವರನ್ನು ಭಾವಿ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ನಾಯಕತ್ವ ಗೊಂದಲ ಹುಟ್ಟುಹಾಕಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಮರಳಿ ಅಧಿಕಾರಕ್ಕೆ ಬರುವುದಾದರೆ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಸ್ಥಾನದ ಹಕ್ಕು ಪ್ರತಿಪಾದನೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಈ ನಡುವೆ ದಲಿತರ ಕೋಟಾದಲ್ಲಿ ಪರಮೇಶ್ವರ್, ಖರ್ಗೆ ರೇಸಿನಲ್ಲಿರುವಾಗ ಮಹದೇವಪ್ಪ ಅವರನ್ನು ಹೊಸ ಹುರಿಯಾಳಾಗಿ ಅಖಾಡಕ್ಕಿಳಿಸುವುದು ಚರ್ಚೆಗೆ ಗ್ರಾಸವಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಖುದ್ದಾಗಿ ಪರಮೇಶ್ವರ್ ಅವರೇ ನಂದಿ ಬೆಟ್ಟದಲ್ಲಿ ಹಿರಿಯ ಕಾಂಗ್ರೆಸ್ಸಿಗರ ಸಭೆ ಕರೆದಿದ್ದು, ಆಂತರಿಕ ಬೇಗುದಿಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ಹಿರಿಯ ನಾಯಕರನ್ನು ಮನಸ್ಸನ್ನು ತಿಳಿಗೊಳಿಸುವ ಯತ್ನಕ್ಕೆ ಕೈ ಹಾಕಿದ್ದಾರೆ.















