Read - < 1 minute
ಬೆಂಗಳೂರು, ಅ.7: ಸತತವಾಗಿ ರಜೆ ಇರುವುದರಿಂದ ಬಹುತೇಕ ಸರ್ಕಾರಿ ಹಾಗೂ ಕೆಲ ಖಾಸಗಿ ಕಚೇರಿಗಳಲ್ಲಿ ಇಂದೇ ಆಯುಧ ಪೂಜೆ ನೆರವೇರಿಸಿ ಸಿಬ್ಬಂದಿಗಳು ಸಂಭ್ರಮಿಸಿದರು.
ನಾಳೆ ಎರಡನೇ ಶನಿವಾರ, ನಾಡಿದ್ದು ಭಾನುವಾರ, ಸೋಮವಾರ ಆಯುಧಪೂಜೆ, ಮಂಗಳವಾರ ವಿಜಯದಶಮಿ ಹಾಗೂ ಬುಧವಾರ ಮೊಹರಂ. ಹೀಗೆ ಸಾಲುಸಾಲು ರಜೆ ಇರುವುದರಿಂದ ಸರ್ಕಾರಿ ನೌಕರರಿಗೆ ಬಂಪರ್ ಸಿಕ್ಕಂತಾಗಿದೆ.
ಸತತ ರಜೆ ಇರವುದರಿಂದ ಸೋಮವಾರ ಕಚೇರಿಗೆ ಬಂದು ಆಯುಧ ಪೂಜೆ ಮಾಡುವ ಬದಲು ಇಂದೇ ಪೂಜೆ ಮಾಡಿ ಒಟ್ಟಿಗೆ ರಜೆ ಸುಖ ಅನುಭವಿಸೋಣ ಎಂದುಕೊಂಡು ಎಲ್ಲಾ ಸಿಬ್ಬಂದಿ ಆಯುಧಪೂಜೆಯನ್ನು ನೆರವೇರಿಸಿದರು.
ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಗೋಪುರ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಿಬಿಎಂಪಿ ಕಚೇರಿ ಸೇರಿದಂತೆ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇಂದೇ ಆಯುಧಪೂಜೆ ನೆರವೇರಿಸಲಾಯಿತು.
ಕಚೇರಿಗಳ ಮುಂದೆ ಬಣ್ಣಬಣ್ಣದ ರಂಗೋಲಿ ಹಾಕಿ, ತಳಿರುತೋರಣ ಕಟ್ಟಿ ಪೂಜೆ ನೆರವೇರಿಸಿ ಪರಸ್ಪರ ಸಿಹಿ ಹಂಚಿ ಸಿಬ್ಬಂದಿಗಳು ಶುಭಾಶಯ ಕೋರಿದರು.
Discussion about this post