ಶಿವಮೊಗ್ಗ, ಅ.24: ನಗರದಲ್ಲಿ ಇತ್ತೀಚೆಗೆ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ರಕ್ಷಣಾ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಕೂಡಲೇ ಮತ್ತೇ ಜಾಗೃತರಾಗಿರುವ ಅಪರಾಧಿಗಳನ್ನು ಮಟ್ಟ ಹಾಕಲು ಇಲಾಖೆ ಸೂಕ್ತ ಕ್ರಮ ಜರುಗಿಸಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಅಪ್ರಾಪ್ತ ಬಾಲಕಿಯನ್ನು ಪುಸಲಾಹಿಸಿ ಸಕ್ರೇಬೈಲ್‌ಗೆ ಕರೆದುಕೊಂಡು ಹೋಗಿ ಆಟೋ ಚಾಲಕರಿಬ್ಬರು ಅತ್ಯಾಚಾರ ಎಸಗಿದ ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠರನ್ನು ಇಂದು ಭೇಟಿ ಮಾಡಿದ ಜಿಲ್ಲಾ ಬಿಜೆಪಿ ಮುಖಂಡರು, ಆರೋಪಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ಪ್ರಕರಣದ ಸೂಕ್ತ ತನಿಖೆ ನಡೆಸಬೇಕು. ಈ ಘಟನೆಯಲ್ಲಿ ಇನ್ನೂ ಹಲವರು ಪಾಲ್ಗೊಂಡಿರುವ ಶಂಕೆಯಿದ್ದು, ಅವರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.
ಮಾಜಿ ಎಂಎಲ್‌ಸಿ ಸಿದ್ರಾಮಣ್ಣ ಮಾತನಾಡಿ, ಸಮಾಜ ವಿರೋಧಿ ಶಕ್ತಿಗಳು ಶಿವಮೊಗ್ಗದಲ್ಲಿ ಮತ್ತೆ ಜಾಗೃತವಾಗಿ ಅವು ತಲೆ ಎತ್ತದಂತೆ ಸೂಕ್ತಕ್ರಮವನ್ನು ಇಲಾಖೆ ಕೈಗೊಳ್ಳಬೇಕು. ಹಗಲು ಹೊತ್ತಿನಲ್ಲೇ ಮಚ್ಚು, ರಿವಾಲ್ವರ್‌ಗಳನ್ನು ಹಿಡಿದು ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಕೆಲವು ಪುಂಡರು ಅತ್ಯಾಚಾರದಂತಹ ಘಟನೆಗೆ ಕಾರಣರಾಗುತ್ತಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಸಂಘ ಪರಿವಾರದ ಮುಖಂಡ ನಟರಾಜ್ ಭಾಗವತ್ ಮಾತನಾಡಿ, ಜಿಲ್ಲೆಯಲ್ಲಿ ರಕ್ಷಣಾ ಇಲಾಖೆ ಸಂಪೂರ್ಣ ವಿಫಲವಾಗಿದೆ. ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಮಾಡಿ ೪೦ ದಿನ ಕೂಡಿ ಹಾಕಿದರೂ ಇಲಾಖೆಗೆ ಮಾಹಿತಿ ಇಲ್ಲ. ಇಂತಹ ಪರಿಸ್ಥಿತಿ ಜಿಲ್ಲೆಯಲ್ಲಿ ಮರುಕಳಿಸಬಾರದು. ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಜಾಗೃತರಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಂಎಲ್‌ಸಿ ಭಾನುಪ್ರಕಾಶ್, ಬಿಜೆಪಿ ಮುಖಂಡರಾದ ಕೆ.ಇ. ಕಾಂತೇಶ್, ಚೆನ್ನಬಸಪ್ಪ, ಡಿ.ಎಸ್. ಅರುಣ್ ಮೊದಲಾದವರಿದ್ದರು.
ಬೆಂಗಳೂರಿನ ಅಪ್ರಾಪ್ತ ಬಾಲಕಿಯನ್ನು ರಕ್ಷಣೆಯ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಯುವತಿಯರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಅ. ೨೬ರಂದು ಎಬಿವಿಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
– ಸಚಿನ್ ರಾಯ್ಕರ್
ನಗರ ಎಬಿವಿಪಿ ಮುಖಂಡ
Discussion about this post