ದೇಹಕ್ಕೆ ಬೇಕು ದಶ ಪ್ರಾಣಗಳು. ಮನುಷ್ಯನು ಜೀವಂತವಾಗಿರಲು ಮುಖ್ಯವಾಗಿ ವಾಯು ಬೇಕು. ಯಾವ ವಾಯು? ಪ್ರಾಣ ( oxygen) ವಾಯು ಬೇಕು. ಈ ಪ್ರಾಣಗಳು ಐದು. ಇದರೊಳಗೆ ಉಪ ಪ್ರಾಣಗಳು ಐದು.
ವಾತಾವರಣದಲ್ಲಿ ಗಾಳಿಯ ಪದರವು ಇರುವುದು ಸಹಜ.ಆದರೆ ಈ ಗಾಳಿಯಲ್ಲಿ ಅನೇಕ ವಿಧಗಳ ವಾಯುಗಳಿವೆ.ಇವೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಭೂಮಿಯ ಜೀವರಾಶಿಗಳಿಗೆ ಬೇಕಾದದ್ದೇ ಆಗಿರುತ್ತದೆ. ಸಸ್ಯಾದಿಗಳಿಗೆ ಇಂಗಾಲ ವಾಯು ಬೇಕಾದರೆ ಮಾನವಾದಿ ಪ್ರಾಣಿಗಳಿಗೆ ಆಮ್ಲಜನಕವು ಬೇಕು.ಜಲಚರಗಳಿಗೆ ದ್ರವ ಆಮ್ಲಜನಕವು ಬೇಕು.
ಸಾಮಾನ್ಯವಾಗಿ ಹೇಳುವುದಾದರೆ ಮಾನವನು ಉಸಿರಾಡುತ್ತಾನೆ ಎನ್ನುತ್ತಾರೆ.ಆದರೆ ಇದೊಂದು ಪ್ರಕೃತಿ. ಇದು ಆಯಾಮ ಇಲ್ಲದ ಉಸಿರಾಟ. ನಮಗರಿವಿಲ್ಲದಂತೆ ನಡೆಯುವ ಕ್ರಿಯೆ.ರಾತ್ರಿ ನಿದ್ದೆಯಲ್ಲಿ ಮೈಮರೆತರೂ,ಕುಡಿದು ಅಕಲಿಲ್ಲದೆ ಬಿದ್ದಿದ್ದರೂ,ಉಸಿರಾಟವು ಅದರಷ್ಟಕ್ಕೇ ಆಗುತ್ತದೆ ಎಂದ ಮೇಲೆ, ‘ ನಾನು ಉಸಿರಾಡುತ್ತಿದ್ದೇನೆ ‘ ಎಂದು ಹೇಳುವುದು ಹಾಸ್ಯಾಸ್ಪದ.ಒಂದುವೇಳೆ ನಾವು ಉಸಿರನ್ನು ಎಷ್ಟು ಹೊತ್ತು ಬಿಗಿದು ಹಿಡಿದುಕೊಳ್ಳಬಹುದು? ಉಸಿರಾಡದೆ ಎಷ್ಟು ಹೊತ್ತು ಇರಬಹುದು? ಯೋಚಿಸಿ. ನಾನು ಉಸಿರಾಡುತ್ತಿದ್ದೇನೆ ಎಂದು ಹೇಳಬೇಕಾದರೆ ಆ ವ್ಯಕ್ತಿಯು ಪ್ರಾಣದ ಆಯಾಮವನ್ನು ಹಿಡಿತದಲ್ಲಿ ಇಟ್ಟು ಕೊಂಡವನಿರಬೇಕು. ಇದನ್ನೇ ಪ್ರಾಣಾಯಾಮ ಎನ್ನುವುದು.
ಈ ಪ್ರಾಣಾಯಾಮ ನಿಪುಣನು ಸಾವಿರ ವರ್ಷವೂ ಬದುಕಲು ಸಾಧ್ಯ. ಈ ಪ್ರಾಣಾಯಾಮದಿಂದ ಪ್ರಾಣದೊಳಗಿನ ಉಪ ಪ್ರಾಣಗಳ ಸ್ಥಿತಿಗತಿ ಗಳನ್ನು ನಿಯಂತ್ರಿಸಿ ಕೊಳ್ಳಬಹುದು.
ಪ್ರಾಣದೊಳಗೆ-
ಪ್ರಾಣ, ಅಪಾನ ,ವ್ಯಾನ, ಉದಾನ, ಸಮಾನಗಳೆಂಬ ಐದು ರೂಪಗಳಿವೆ. ಇದೇ ಐದು ರೂಪಗಳ ಈ ಪ್ರಾಣಗಳೊಳಗೆ ಕ್ರಮವಾಗಿ ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯಗಳೆಂಬ ಐದು ಉಪಪ್ರಾಣ ಗಳಿವೆ.
ಪ್ರಧಾನವಾದ ಪ್ರಾಣವಾಯುವು ಹೃದಯ ಸಂಬಂಧವಾಗಿಯೂ, ಅಪಾನವು ಗುದ ಸ್ಥಾನ( exit valve) , ವ್ಯಾನವು ಶರೀರ ವ್ಯಾಪಿಯಾಗಿಯೂ, ಉದಾನವು ಕಂಠ ಪ್ರದೇಶದಲ್ಲೂ, ಸಮಾನವು ನಾಭಿಪ್ರದೇಶದಲ್ಲೂ, ಕಾರ್ಯ ನಿರ್ವಹಿಸುತ್ತದೆ.
ಇದರ ಉಪವಾಯುಗಳು- ನಾಗ ವಾಯುವು ವಾಗೀಂದ್ರ್ಯಕ್ಕೆ ಸಂಬಂಧಿರುತ್ತದೆ. ಕೂರ್ಮ ವಾಯುವು ಉನ್ಮೀಲನ ಶಕ್ತಿಗೆ ಸಂಬಂಧಿಸಿದೆ.ಕೃಕರ ವಾಯುವು ಹಸಿವು,ನೀರಡಿಕೆಗಳಿಗೆ ಸಂಬಂಧಿಸಿದೆ. ದೇವದತ್ತ ವಾಯುವು ಆಕಳಿಕೆ ಬಿಕ್ಕಳಿಕೆಯ ಕಾರ್ಯಕ್ಕೆ ಸಂಬಂಧಿಸಿರುತ್ತದೆ.ಕೊನೆಯದ್ದಾದ ಇಡೀ ದೇಹವ್ಯಾಪಿಯಾಗಿ ಕಾರ್ಯ ನಿರ್ವಹಿಸುತ್ತದೆ ( supervising ) .
ಯಾವಾಗ ಪ್ರಾಣದ ಆಯಾಮ( ಚಲನೆ) ಸರಿಯಾಗಿರುವುದಿಲ್ಲವೋ ಆಗ ಈ ವಾಯುಗಳು ಅಸಮರ್ಪಕ ಕಾರ್ಯ( malfunctioning ) ಮಾಡುತ್ತವೆ.ಇದು ರೋಗಾದಿ ಆದಿವ್ಯಾದಿಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟಂತಾಗಿ ಆಯು ಕ್ಷೀಣತೆ ಉಂಟಾಗುತ್ತದೆ. ಸರಿಯಾದ ಗುರುವಿನ ಮೂಲಕ ಪ್ರಾಣಾಯಾಮ ಮಾಡಿದರೆ ಮಾಡಬಾರದ್ದನ್ನು, ಮಾಡುವ, ತಿನ್ನಬಾರದ್ದನ್ನು ತಿನ್ನುವ ಆಸಕ್ತಿಗಳು ಹೊರಟುಹೋಗಿ ಶುದ್ಧ ಆರೋಗ್ಯವೂ,ಆಯುಸ್ಸೂ ಲಭಿಸುತ್ತದೆ. ಕೆಲವೊಮ್ಮೆ ಅಪಥ್ಯ ಆಹಾರವನ್ನೂ ಜೀರ್ಣಿಸಿಕೊಳ್ಳುವ ಸಾಮರ್ಥ್ಯವೂ ಬರಬಹುದು. ಈ ಪ್ರಾಣಾಯಾಮ ಮಾಡಿದ ನಂತರವೇ ಜಪಾನುಷ್ಟಾನ, ಪೂಜೆಗಳು, ಉಪಾಸನೆಗಳನ್ನು ಮಾಡುವ ಪದ್ಧತಿ ನಮ್ಮ ವೈದಿಕ ಪರಂಪರೆಯಲ್ಲಿ ಬೆಳೆದುಬಂದಿದೆ.
ಯಾವಾಗ ಪ್ರಾಣದ ಆಯಾಮಗಳು ಅಸಂಭದ್ದ ರೀತಿಯಲ್ಲಿ ಸಾಗುತ್ತದೋ ,ದೇಹವು ಅದರ ಸುಸ್ಥಿತಿಯನ್ನು ಕಾಪಾಡಿಕೊಳ್ಳಲು ವಿಫಲವಾಗುತ್ತದೆ. ದೇಹಕ್ಕೆ ರೋಗಬರುವುದು ಮನೋ ವಿಕಲ್ಪಗಳಿಂದ.ಮನೋ ವಿಕಲ್ಪಗಳು ನಾಡಿಗಳ ಮಿಡಿತದ ವೆತ್ಯಾಸದಿಂದ.ನಾಡಿಯ ಮಿಡಿತಗಳ ನಿಯಂತ್ರಣವು ಈ ದಶ ಪ್ರಾಣಗಳಿಂದ. ಯಾವ ಕಾಲಕ್ಕೆ ಏನು ಮಾಡಬೇಕೆಂಬ ಸುಜ್ಞಾನಕ್ಕೆ ಈ ಪ್ರಾಣದ ಆಯಾಮ ನಿಯಮವು ಖಂಡಿತವಾಗಿಯೂ ಅತ್ಯುತ್ತಮವಾದ ಒಂದು ಮಾರ್ಗವಾಗಿದೆ. ಇದಕ್ಕಾಗಿ ಪ್ರಾಜ್ಞರು ಇದಕ್ಕೆ ಬಹಳ ಮಹತ್ವ ನೀಡಿ, ‘ ಹರಿ ಸರ್ವೋತ್ತಮ, ವಾಯು ಜೀವೋತ್ತಮ’ ಎಂದರು.ಆದರೆ ಕೆಲ ಮೂರ್ಖ ವಿಚಾರವಾದಿಗಳು ಅವರವರ ದೇವತಾ ಬೇಧಗಳಿಂದಾಗಿ , ಮೂಲ ತತ್ವ ತಿಳಿಯದೆ ಇದನ್ನು ಜರೆದರು. ಹರಿ ಎಂದರೆ ರವಿ.ವಾಯು ಎಂದರೆ ಜೀವೋತ್ತಮನಾದ ವಾಯುದೇವರು. ಇವರಿಬ್ಬರಿಲ್ಲದಿದ್ದರೆ ಜೀವನವೇ ಇಲ್ಲ. ರವಿಯನ್ನು ಸೂರ್ಯ ನಾರಾಯಣನೆಂದರು.’ನಾರಾ ‘ಎಂದರೆ ಆಕಾಶ (spectrum) ಎಂದರ್ಥ.ಆಯನ ಎಂದರೆ ಸಂಚಾರ.ಈ ಆಕಾಶದಲ್ಲಿ ಸಂಚರಿಸುವವ ಪ್ರಧಾನ ಶಕ್ತಿಯೇ ಸೂರ್ಯ ನಾರಾಯಣ. ಅವನನ್ನೇ ಹರಿಯೆಂದರು. ಹಾಗಾಗಿ ಹರಿ ಸರ್ವೋತ್ತಮ ವಾಯು ಜೀವೋತ್ತಮ ಆಗಿರುತ್ತಾರೆ.
Discussion about this post