ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್’ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್’ನ್ನು ಉಗ್ರರು ಸ್ಫೋಟಿಸಿರುವ ಪರಿಣಾಮ 18 ಯೋಧರು ವೀರಸ್ವರ್ಗ ಸೇರಿದ ಘಟನೆ ನಡೆದಿದೆ.
ಐಇಡಿ ಸ್ಫೋಟದಲ್ಲಿ ಹಲವು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಉಗ್ರರ ಗುಂಪೊಂದು ಇಂದು ಮಧ್ಯಾಹ್ನ ಪುಲ್ವಾಮಾದ ಆವಂತಿಪೋರಾದ ಗೋರಿಪುರ ಪ್ರದೇಶದಲ್ಲಿ ಸಾಗುತ್ತಿದ್ದ ಸಿಆರ್’ಪಿಎಫ್ ವಾಹನಗಳ ಸಾಲನ್ನು ಗುರಿ ಇರಿಸಿ ಐಇಡಿ ಬ್ಲಾಸ್ಟ್ ನಡೆಸಿದೆ.
ಸ್ಫೋಗೊಂಡ ದಾರಿಯಲ್ಲಿ ಸುಮಾರು 70 ಕಾನ್ವೆ ವಾಹನಗಳು ಚಲಿಸುತ್ತಿದ್ದವು. ಈ ಪೈಕಿ ಒಂದು ಬಸ್ ಆಕ್ರಮಣಕ್ಕೆ ಒಳಗಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಘಟನೆ ನಡೆದ ಸುದ್ದಿ ತಿಳಿದ ತತಕ್ಷಣ ಹೆಚ್ಚುವರಿ ಭದ್ರತಾ ಪಡೆಯನ್ನು ಬ್ಲಾಸ್ಟ್ ನಡೆದ ತಾಣಕ್ಕೆ ರವಾನಿಸಲಾಗಿದ್ದು, ಇಡಿಯ ಪ್ರದೇಶವನ್ನು ಈಗ ಸುತ್ತುವರಿಯಲಾಗಿದೆ ಎಂದು ವರದಿಯಾಗಿದೆ.
ಜಮ್ಮು ಕಾಶ್ಮೀರದ ಬಡಗಾಂವ್‌ನಲ್ಲಿ ನಿನ್ನೆಯಷ್ಟೇ ಭದ್ರತಾ ಪಡೆಗಳು ಎನ್‌ಕೌಂಟರ್ ನಡೆಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಘಟನೆಗೆ ಪ್ರತೀಕಾರವಾಗಿ ಉಗ್ರರು ಇಂದಿನ ಐಇಡಿ ಬ್ಲಾಸ್ಟ್ ನಡೆಸಿರಬೇಕೆಂದು ಶಂಕಿಸಲಾಗಿದೆ.
ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ.
Discussion about this post