Read - < 1 minute
ವಾಷಿಂಗ್ಟನ್, ಸೆ.7: ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾದೆದುರೇ ಅದರ ನಿಕಟ ಮಿತ್ರ ಪಾಕಿಸ್ಥಾನವನ್ನು ದಕ್ಷಿಣ ಏಶ್ಯಾದಲ್ಲಿ ಭಯೋತ್ಪಾದನೆಗಾಗಿ ಕುಮ್ಮಕ್ಕು ನೀಡುವ ಏಕೈಕ ರಾಷ್ಟ್ರ ಎಂದು ಭಾರತ ಪ್ರಧಾನಿ ನರೇಂದ್ರ ಮೋದಿ ಜರೆದಿದ್ದರು. ನಂತರ ಇದೀಗ ಅಮೆರಿಕವು ಭಾರತದಲ್ಲಿ 26/11ರ ಮುಂಬೈ ಮೇಲಿನ ದಾಳಿಗಾಗಿ ನಿರ್ಣಾಯಕವಾಗಿ ನ್ಯಾಯವನ್ನು ಅದರಿಂದ ತಾನು ನಿರೀಕ್ಷಿಸುವೆನೆಂದು ಪಾಕಿಸ್ಥಾನಕ್ಕೆ ನೆನಪಿಸಿದೆ.
ಮುಂಬೈ ದಾಳಿ ಪ್ರಕರಣದಲ್ಲಿ ಹೊಣೆಗಾರಿಕೆ ಮತ್ತು ನ್ಯಾಯ ಕಾಣುವುದಕ್ಕೆ ನಾವು ಅಪೇಕ್ಷಿಸುವುದಾಗಿ ದಾಳಿಗೆ ಒತ್ತುಗೊಟ್ಟು ಅಮೆರಿಕ ಪಾಕಿಸ್ಥಾನವನ್ನು ಚುಚ್ಚಿದೆ.
26/11ರ ಮುಂಬೈ ದಾಳಿಯಲ್ಲಿ ಅಮೆರಿಕದ ನಾಗರಿಕರು ಸಾವಿಗೀಡಾಗಿದ್ದು ಈ ಬಗ್ಗೆ ಪಾಕಿಸ್ಥಾನದಿಂದ ಹೊಣೆಗಾರಿಕೆ ಮತ್ತು ನ್ಯಾಯಕ್ಕಾಗಿ ಅಮೆರಿಕ ಆಗ್ರಹಿಸುತ್ತಿದೆ ಎಂದು ವಿದೇಶಾಂಗ ಉಪ ವಕ್ತಾರ ಮಾರ್ಕ್ ಟೋನರ್ ಸೋಮವಾರ ತಿಳಿಸಿದ್ದಾರೆ.
ಕರಾಚಿಯಿಂದ ಸಮುದ್ರ ಮಾರ್ಗವಾಗಿ 2008ರ ನವೆಂಬರ್ 26ರಂದು ಮುಂಬೈಗೆ ಬಂದ ಶಸ್ತರಧಾರಿ ಹತ್ತು ಎಲ್ಇಟಿ ಉಗ್ರರು 166 ಜನರ ಹತ್ಯೆ ನಡೆಸಿದ್ದರು. ಅವರಲ್ಲಿ 6 ಅಮೆರಿಕನ್ ನಾಗರಿಕರು ಸೇರಿದ್ದಾರೆ.
ಕಳೆದವಾರ ದಿಲ್ಲಿಗೆ ಭೇಟಿ ನೀಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ, 26/11ರ ಉಗ್ರರ ದಾಳಿ ಹೊಣೆಯನ್ನು ಹೊತ್ತು ಪಾಕಿಸ್ಥಾನ ದಾಳಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕೆಂಬ ಭಾರತದ ಬೇಡಿಕೆಯನ್ನು ಸಂಪೂರ್ಣ ಬೆಂಬಲಿಸುತ್ತದೆ ಎಂದಿದ್ದರು.
ಇದೇ ವೇಳೆ ಈ ವರ್ಷ ಜನವರಿಯಲ್ಲಿ ಪಾಕ್ ಕುಮ್ಮಕ್ಕಿನಲ್ಲಿ ಪಠಾಣ್ ಕೋಟ್ ವಾಯುನೆಲೆ ಮೇಲಾದ ಉಗ್ರರ ದಾಳಿ ಹೊಣೆ ಹೊತ್ತು ಅಪರಾಧಿಗಳಿಗೆ ಶಿಕ್ಷೆ ನೀಡುವಂತೆಯೂ ಕೆರೆ ಪಾಕಿಸ್ಥಾನಕ್ಕೆ ಒತ್ತಾಯ ಮಾಡಿದ್ದರು.
ಚೀನಾಕ್ಕೆ ಜಿ – 20 ಶೃಂಗ ಸಭೆಗಾಗಿ ತೆರಳಿದ್ದ ಪ್ರಧಾನಿ ಮೋದಿ ಅಲ್ಲಿ ತನ್ಮಧ್ಯೆ ಸೇರಿದ್ದ ಬ್ರಿಕ್ಸ್ ಕೂಟದ ಸಭೆಯಲ್ಲಿ ಚೀನಾದ ಮುಂದೆಯೇ ಪಾಕಿಸ್ಥಾನ ತನ್ನ ನೆಲದಲ್ಲಿ ತರಬೇತಾದ ಉಗ್ರರನ್ನು ಗಡಿಯಾಚೆಯಿಂದ ಒಳದಬ್ಬಿ ಕಾಶ್ಮೀರದಲ್ಲಿ ನರಹತ್ಯೆಗೆ ಕುಮ್ಮಕ್ಕು ನೀಡುವ ಭಯೋತ್ಪಾದನೆಯ ಪ್ರಾಯೋಜಕನೆಂದು ಜರೆದಿದ್ದರು. ಪ್ರಸ್ತುತ ಕಾಶ್ಮೀರದ ಪ್ರಕ್ಷುಬ್ಧತೆಗೂ ಪಾಕ್ ಬೆಂಬಲವೇ ಮೂಲ ಎಂಬ ವಿಚಾರ ಈಗ ಜಗಜ್ಜಾಹೀರಾಗಿದೆ.
Discussion about this post