ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ ಹಾಲಿ 30 ಮುಖ್ಯಮಂತ್ರಿಗಳ ಪೈಕಿ 29 ಮಂದಿ ಕೋಟ್ಯಾಧಿಪತಿಗಳಾಗಿದ್ದು, ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಒಟ್ಟು 510 ಕೋಟಿ ರೂ. ಆಸ್ತಿ ಹೊಂದುವ ಮೂಲಕ ದೇಶದ ಅತಿ ಹೆಚ್ಚು ಶ್ರೀಮಂತ ಸಿಎಂ ಎನಿಸಿಕೊಂಡಿದ್ದಾರೆ.
ಚುನಾವಣಾ ಅಫಿಡವಿಟ್’ಗಳ ಪ್ರಕಾರ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವಿಶ್ಲೇಷಣೆ ಪ್ರಕಾರ, ಜಗನ್ ಮೋಹನ್ ರೆಡ್ಡಿ ಅತಿ ಶ್ರೀಮಂತ ಸಿಎಂ ಆಗಿದ್ದರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು 15 ಲಕ್ಷ ರೂ. ಆಸ್ತಿ ಹೊಂದಿರುವ ಮೂಲಕ ಕೊನೆಯ ಸ್ಥಾನದಲ್ಲಿದ್ದಾರೆ.
ಪ್ರಸ್ತುತ 30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಪ್ರಮಾಣ ವಚನ ಮತದಾನದ ಅಫಿಡವಿಟ್’ಗಳ ಆಧಾರದಲ್ಲಿ ಈ ಮಾಹಿತಿ ಬಿಡುಗಡೆಯಾಗಿದೆ.

30 ಸಿಎಂಗಳ ಪೈಕಿ 29 (ಶೇ. 97) ಕೋಟ್ಯಾಧಿಪತಿಗಳಾಗಿದ್ದು, ಪ್ರತಿ ಸಿಎಂಗೆ ಸರಾಸರಿ ಆಸ್ತಿ 33.96 ಕೋಟಿ ರೂ. ಎಂದು ಎಡಿಆರ್ ಹೇಳಿದೆ.
ಇನ್ನು ವರದಿಯ ಪ್ರಕಾರ, 30 ಸಿಎಂಗಳ ಪೈಕಿ 13 (ಶೇ. 43) ಮಂದಿ ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ. ಗಂಭೀರ ಕ್ರಿಮಿನಲ್ ಪ್ರಕರಣಗಳು ಜಾಮೀನು ರಹಿತ ಅಪರಾಧಗಳಾಗಿದ್ದು, ಐದು ವರ್ಷಗಳಿಗೂ ಹೆಚ್ಚು ಜೈಲು ಶಿಕ್ಷೆಯನ್ನು ನೀಡುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ (15 ಲಕ್ಷ ರೂ.ಗೂ ಹೆಚ್ಚು), ಕೇರಳದ ಪಿಣರಾಯಿ ವಿಜಯನ್ (1 ಕೋಟಿ ರೂ.ಗೂ ಹೆಚ್ಚು) ಮತ್ತು ಹರಿಯಾಣದ ಮನೋಹರ್ ಲಾಲ್ (1 ಕೋಟಿ ರೂ.ಗೂ ಹೆಚ್ಚು) ಅವರುಗಳು ಅತಿ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳು ಎಂದು ವರದಿ ಹೇಳಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ದೆಹಲಿಯ ಅರವಿಂದ್ ಕೇಜ್ರಿವಾಲ್ ಇಬ್ಬರೂ ತಲಾ 3 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post