ಕಲ್ಪ ಮೀಡಿಯಾ ಹೌಸ್ | ಅಂಜನಾದ್ರಿ ಬೆಟ್ಟ(ಕೊಪ್ಪಳ) |
ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ Anjanadri hill ಸೋಮವಾರ ಹನುಮ ವ್ರತ ಅದ್ಧೂರಿಯಾಗಿ ಜರುಗಿತು. ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಭಕ್ತರ ದಂಡು ಹರಿದು ಬಂದಿದ್ದು, ಹನುಮ ಮಾಲೆ ವಿಸರ್ಜನೆ ಮಾಡಿದರು.
ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ, ಗದಗ, ಹಾವೇರಿ ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಯಿಂದ ಸಾವಿರಾರು ಹನುಮ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಹನುಮಾನ್ ಭಕ್ತರು ಹರಿದು ಬಂದರು.
ಭಾನುವಾರದಿಂದಲೇ ಹನುಮ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಬಂದು ಪೂಜೆ ಸಲ್ಲಿಸಿ ಸುತ್ತಮುತ್ತಲಿನ ಪ್ರಸಿದ್ಧ ಹಂಪೆ, ಆನೆಗುಂದಿ, ಸಂಡೂರು ಹಾಗೂ ಹುಲುಗಿ ಗ್ರಾಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮಾಲೆ ವಿಸರ್ಜನೆ ಕಾರ್ಯಕ್ರಮದ ಭಾಗವಾಗಿ ಅಂಜನಾದ್ರಿ ಬೆಟ್ಟದ ಮೇಲೆ ಬೆಳಗ್ಗೆಯಿಂದಲೇ ಹೋಮ-ಹವನ ನಡೆದವು. ಬೆಟ್ಟದ ಮುಂದಿನ 575 ಮೆಟ್ಟಲು ಏರಿ ಬಂದ ಭಕ್ತರು ಹನುಮಂತನ ದರ್ಶನ ಪಡೆದು, ಮಾಲೆ ವಿಸರ್ಜಿಸಿದರು. ಇನ್ನು ಇದೇ ವೇಳೆ ಹನುಮ ಮಾಲಾಧಾರಿಗಳ ಜೊತೆ ಶ್ರೀರಾಮ ಸೇನೆ ಮುಖ್ಯಸ್ಥರು ರಾಜಕೀಯ ಮುಂಖಡರು, ಹನುಮ ಸೇನೆ ಭಕ್ತರು ಕೂಡ ಆಗಮಿಸಿದ್ದರು.
ಕೊಪ್ಪಳ ಮಾರ್ಗವಾಗಿ ಅಂಜನಾದ್ರಿಗೆ ಬಂದ ಮಾಲಾಧಾರಿಗಳು ನೇರವಾಗಿ ಬೆಟ್ಟ ಏರಿದರು. ಆದರೆ ಗಂಗಾವತಿ ಭಾಗದಿಂದ ಅಂಜನಾದ್ರಿಗೆ ಬರುವ ಬಾಗಲಕೋಟೆ, ರಾಯಚೂರು, ಯಾದಗಿರಿ, ಕಲಬುರಗಿ ಸೇರಿ ವಿವಿಧ ಜಿಲ್ಲೆಯ ಭಕ್ತರು ಗಂಗಾವತಿ ನಗರದಲ್ಲಿ ಸಂಕೀರ್ತನೆ ಯಾತ್ರೆ ಮೂಲಕ ನಗರ ದಾಟಿ, ನಂತರ ವಾಹನಗಳ ಮೂಲಕ ಬೆಟ್ಟಕ್ಕೆ ಆಗಮಿಸಿದರು.
ಸಾವಿರಾರು ಭಕ್ತರು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಹನುಮಾ ಚಾಲೀಸಾ ಜಪಿಸುತ್ತಾ ಅಂಜನಾದ್ರಿ ಬೆಟ್ಟ ಏರಿ, ಹನುಮ ಮಾಲೆ ವಿಸರ್ಜಿಸಿ, ಪೂಜೆ ಸಲ್ಲಿಸಿದ್ದಾರೆ. ಹಿಂದೂ ದೇವಾನು ದೇವತೆಗಳಲ್ಲಿ ಹನುಮನನ್ನು ಅತ್ಯಂತ ಶಕ್ತಿಸಾಲಿ ಎಂದು ದೇಶದಾದ್ಯಂತ ಪೂಜಿಸುತ್ತಾರೆ. ಸೋಮವಾರ ಹನುಮ ಜಯಂತಿಯನ್ನು ಜಿಲ್ಲಾಡಳಿತ ಮತ್ತು ದೇವಸ್ಥಾನದ ಸಮಿತಿಯವರು ಸರ್ಕಾರದ ಆದೇಶದಂತೆ ಅಂಜನಾದ್ರಿ ಬೆಟ್ಟದ ಮೇಲೆ ಆಚರಿಸಲಾಯಿತು.
ಹನುಮನಿಗೆ ವಾಯುಪುತ್ರ, ಕಪಿವೀರ, ಅಂಜನೇಯ, ಅಂಜನಿ ಪುತ್ರ, ಭಜರಂಗಬಲಿ ಎಂಬೆಲ್ಲಾ ಹೆಸುರುಗಳಿಂದ ಕರೆಯುತ್ತಾರೆ. ಜಾತಿ, ಮತ, ಪಂಥಗಳ ಬೇಧವಿಲ್ಲದ ಆಂಜನೇಯನಿಗೆ ತುಳಸಿ ಮಾಲೆ ಬಲು ಪ್ರಿಯ. ಹಾಗಾಗಿ ಹನುಮ ಜಯಂತಿಯ ಪ್ರಯುಕ್ತ ಭಕ್ತರು ತುಳಸಿ ಮಾಲಯನ್ನು ಪೂಜೆ ಮಾಡಿಸಿಕೊಂಡು ಸಲ್ಲಿಸುತ್ತಿದ್ದ ದೃಶ್ಯಗಳನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನೇಯ ಸ್ವಾಮಿಯ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದ ಮೇಲೆ ಕಾಣಬಹುದು.
ಸೋಮವಾರ ಮತ್ತು ಹುಣ್ಣಿಮೆ ಇರುವ ಕಾರಣ ಶ್ರೀ ವಿಷ್ಣುವಿನ ಸಮೇತ ಶ್ರೀ ರಾಮದೇವರಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ಆಂಜನೇಯನಿಗೆ ಪೂಜೆ ಸಲ್ಲಿಸಲಾಯಿತು. ಹೊರಗಿನಿಂದ ಭಕ್ತರು ಬರುವುದನ್ನು ತಡೆಯಲಾಗಿತ್ತು. ಸಮಿತಿಯ ಸದಸ್ಯರು ಮತ್ತು ಊರಿನ ಜನರ ಸಂಮುಖದಲ್ಲಿ ವಿಶೇಷ ಪೂಜೆಯನ್ನು ಹನುಮ ಜಯಂತಿಯ ದಿನವಾದ ನಿನ್ನೆ ಶ್ರೀ ಆಂಜನೇಯ ಸ್ವಾಮಿಗೆ ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಲಾಯಿತು.
ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಆಂಜನೇಯ ಜನಿಸಿದ ಸ್ಥಳವೆಂದೇ ಖ್ಯಾತ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ. ಈ ಅಂಜನಾದ್ರಿ ಬೆಟ್ಟದಲ್ಲಿ ಇರುವ ಆಂಜನೇಯ ಸ್ವಾಮಿ ದೇವಾಲಯಕ್ಕೆ ನಾಡಿನ ಎಲ್ಲ ಕಡೆಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.
ಗಂಗಾವತಿ ನಗರದಲ್ಲಿ ನಡೆದ ಹನುಮ ಮೂಲಾಧಾರಿಗಳ ಸಂಕೀರ್ತನಾ ಯಾತ್ರೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ್ ದಡೆಸೂಗೂರು, ಸಂಸದ ಸಂಗಣ್ಣ ಕರಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್. ಶ್ರೀನಾಥ್ ಸೇರಿ ವಿವಿಧ ಗಣ್ಯರು ಭಾಗಿ ಆಗಿದ್ದರು.
ಇನ್ನು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ದಿಢೀರ್ ಬೆಳಗ್ಗೆ ಪಂಪಾ ಸರೋವರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹನುಮ ಮಾಲೆ ಧರಿಸಿ, ಸಂಕೀರ್ತನಾ ಯಾತ್ರೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ದಿಢೀರ್ ಪ್ರವೇಶ ಗಂಗಾವತಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಂಜನಾದ್ರಿ ಬೆಟ್ಟಕ್ಕೆ ತೆರಳಲು ಭಕ್ತರಿಗೆ ತಾಲೂಕು ಆಡಳಿತ ಮತ್ತು ಬಿಗಿ ಭದ್ರತೆಯನ್ನು ನೀಡಿ ಪೊಲೀಸ್ ಇಲಾಖೆ ಮುಕ್ತ ಅವಕಾಶ ಕಲ್ಪಿಸಿದೆ. ಯಾವುದೇ ನಿರ್ಬಂಧ ಇಲ್ಲದೆ ನೇರವಾಗಿ ಆಯಾ ಜಿ¯್ಲÉಗಳಿಂದ ಬರುವ ಭಕ್ತರು ಅಂಜನಾದ್ರಿ ಬೆಟ್ಟಏರಲು ಆನೆಗೊಂದಿ-ಮುನಿರಾಬಾದ್ ಮಾರ್ಗವಾಗಿ ಹೋಗಲು ಅವಕಾಶ ನೀಡಿದೆ. ಬೆಟ್ಟ ಏರಲು ಇಕ್ಕಟ್ಟಾದ ಮಾರ್ಗ ಇರುವುದರಿಂದ ಭಕ್ತರು ನಿಧಾನವಾಗಿ ಬೆಟ್ಟ ಏರಿ ದರ್ಶನ ಪಡೆದ ನಂತರ ಚಿಕ್ಕರಾಂಪುರ ಮಾರ್ಗವಾಗಿ ತೆರಳಲು ಅವಕಾಶ ನೀಡಿದೆ. ಚಿಕ್ಕರಾಂಪುರ ಸನಿಹದಲ್ಲಿ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
(ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post