ಕಲ್ಪ ಮೀಡಿಯಾ ಹೌಸ್ | ಸೊರಬ |
ವಿಕೇಂದ್ರೀಕೃತ ಚದುರಿದ ರಾಜ್ಯಾಡಳಿತವನ್ನು ಒಗ್ಗೂಡಿಸಿದ ಇಂತಹ ಶುಭ ದಿನವನ್ನು ಸಂಘಟನಾತ್ಮಕ ಸಾಮಾಜಿಕ ಚಟುವಟಿಕೆಗಳ ಮೂಲಕ ವೈಯಕ್ತಿಕ ಅಭಿವೃದ್ಧಿಯ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಬಳಸಿಕೊಳ್ಳಬೇಕು ಎಂದು ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಚಂದ್ರಗುತ್ತಿ ಹೋಬಳಿ ಮುಟಗುಪ್ಪೆ ಗ್ರಾಪಂ ವ್ಯಾಪ್ತಿಯ ಯಲಸಿ ಗ್ರಾಮದಲ್ಲಿ ಅಮೃತ ಸರೋವರ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಗೋಕಟ್ಟೆ ಪ್ರದೇಶದ ಪವಿತ್ರ ವನದಲ್ಲಿ ಗ್ರಾಪಂ ಆಡಳಿತದ ವತಿಯಿಂದ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಗ್ರಾಮ ಶಕ್ತಿಯೆ ರಾಷ್ಟ್ರಶಕ್ತಿಯಾಗುತ್ತದೆ. ನಮ್ಮ ಹಕ್ಕಿನಷ್ಟೆ ಕರ್ತವ್ಯದ ಬಗ್ಗೆಯೂ ಅರಿತು ಆಂತರಿಕ ಪ್ರಜ್ಞೆಯನ್ನು ವೃದ್ಧಿಗೊಳಿಸಿಕೊಳ್ಳಬೇಕು ಎಂದರು.
ಮುಟಗುಪ್ಪೆ ಗ್ರಾಪಂ ಪಿಡಿಒ ರಮೇಶ್ ಪ್ರಾಸ್ತಾವಿಕ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಗ್ರಾಮ ಮಟ್ಟಕ್ಕೆ ತಲುಪಿಸುವತ್ತ ಇಲಾಖೆಗಳು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಯೋಜನೆಗಳ ಸದುಪಯೋಗದ ಮೂಲಕ ಸುಸ್ಥಿರ ಗ್ರಾಮ ಅಭಿವೃದ್ಧಿಯತ್ತ ಜನತೆ ಮುಖ ಮಾಡಬೇಕು ಎಂದರು.
ಕಾರ್ಯದರ್ಶಿ ಸುಧಾಕರ್, ಗ್ರಾಮಾಧ್ಯಕ್ಷ ಕಾಳಿ ಧರ್ಮಪ್ಪ, ಗ್ರಾಮ ಪ್ರಮುಖ ಬಿ.ಸಿ.ಪ್ರಭಾಕರ್, ರವಿ, ಬೊಮ್ಮಪ್ಪ, ಬಸಪ್ಪ, ಅಜ್ಜಪ್ಪ , ಶ್ರೀರಾಮಕೊಠಾರಿ, ಅನಂತಶೇಟ್, ಏ.ಶ್ರೀನಿವಾಸ, ಚೌಡಪ್ಪ, ಚಂದ್ರಪ್ಪ, ರಾಮಪ್ಪ, ಗ್ರಾಪಂನ ಸರಿತಾ, ರಮೇಶ್ ಅಭಿಯಂತರರು, ಸಿಬ್ಬಂದಿ ಆನಂದಪ್ಪ, ಶೇಷಪ್ಪ ಮೊದಲಾದವರಿದ್ದರು.
ವರದಿ: ಮಧುರಾಮ್, ಸೊರಬ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















