ಕಲ್ಪ ಮೀಡಿಯಾ ಹೌಸ್ | ಕುಂದಾಪುರ |
ಬೈಂದೂರು ತಾಲೂಕು ಕೇಂದ್ರವಾಗಿ ಘೋಷಣೆಯಾದ ಬಳಿಕ ಇಲ್ಲಿಗೆ ಅವಶ್ಯಕತೆಯಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಶೇಷ ಆಸಕ್ತಿಯೊಂದಿಗೆ ನಾವು ಬದ್ದರಾಗಿದ್ದೇವೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದ್ದಾರೆ.
ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿ, ಬೈಂದೂರು ತಾಲೂಕು ಕೇಂದ್ರವಾಗಿ ಘೋಷಷಣೆಯಾದ ಬಳಿಕ ಇಲ್ಲಿಗೆ ಅವಶ್ಯಕತೆಯಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಪ್ರಮುಖ ಜವಬ್ದಾರಿಯಾಗಿದ್ದು ಬೈಂದೂರು ಅಭಿವೃದ್ದಿ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಹತ್ತು ಕೋಟಿ ಅನುದಾನದ ತಾಲೂಕು ಆಡಳಿತಸೌಧ ಶೀಘ್ರವಾಗಿ ನಿರ್ಮಾಣಗೊಂಡಿದೆ ಎಂದರು.
ಕುಂದಾಪುರ ಡಬ್ಬಲ್ ಇಂಜಿನ್ ಸರ್ಕಾರದ ಆಡಳಿತಾವಧಿಯಲ್ಲಿ ಬೈಂದೂರು ಕ್ಷೆತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸ್ವಾತಂತ್ರ ಬಂದು 75 ವರ್ಷಗಳಾದರೂ ಎಂದೂ ಕಾಣದ ಅಭಿವೃದ್ಧಿ ಕಾರ್ಯಗಳು ಬೈಂದೂರಿನಲ್ಲಿ ನಡೆದಿದೆ ಎಂದರು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ತಾಲೂಕು ಆಡಳಿತ ಸೌಧದಲ್ಲಿ ಜನಸಾಮಾನ್ಯರಿಗೆ ಸಮರ್ಪಕ ಸೇವೆ ನೀಡುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಬೈಂದೂರು ಕ್ಷೇತ್ರ ಸೇರಿದಂತೆ ಇಡಿಯ ತಾಲೂಕಿನ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ. ಮುಂದೆಯೇ ಸಹ ಮಾದರಿ ಕ್ಷೇತ್ರವನ್ನಾಗಿ ಮಾಡಲು ಕಂಕಣ ಬದ್ದರಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಆಡಳಿತದ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಸುಜಯ್ ಕುರ್ಮಾ ಶೆಟ್ಟಿ, ಕೆ.ಎಂ. ಹರೀಶ್ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರೆ ಎಂ. ಸಹನ ಹಾಗೂ ಕಾರ್ಯಪಾಲಕ ಅಭಿಯಂತರೆ ಮಂಜುಳಾ ಅವರನ್ನು ಸನ್ಮಾನಿಸಲಾಯಿತು. ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸಲಾಯಿತು.
ಉಡುಪಿ ಜಿಲ್ಲಾಧಿಕಾರಿ ಎಂ. ಕೂರ್ಮರಾವ್, ಜಿಲ್ಲಾ ಪೊಲೀಸ್ ಅಧಿಕ್ಷಕ ಅಕ್ಷಯ ಎಂ. ಹಾಕೆ, ಮೈಸೂರು ಇಲೆಕ್ಟ್ರಿಕಲ್ ನಿಗಮದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ವಿಣಾ ಬಿ.ಎನ್, ಕುಂದಾಪುರ ಸಹಾಯಕ ಆಯುಕ್ತೆ ಎಸ್.ಆರ್. ರಶ್ಮಿ, ಬೈಂದೂರು ತಹಸೀಲ್ದಾರ್ ಶ್ರೀಕಾಂತ ಹೆಗ್ಡೆ, ಶಿಕ್ಷಕರಾದ ಗಣಪತಿ ಹೋಬಳಿದಾರ್ ಹಾಗೂ ಸುಧಾಕರ ಪಿ. ಬೈಂದೂರು, ಸುಬ್ರಹ್ಮಣ್ಯ ಜಿ. ಉಪ್ಪುಂದ ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















