ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
40 ವರ್ಷಗಳ ಬಿಜೆಪಿಯ ಬಾಂಧವ್ಯವನ್ನು ತೊರೆದು ಕಾಂಗ್ರೆಸ್ ಸೇರಿರುವ ನಾನು ಅವಕಾಶವಾದಿಯಲ್ಲ ಹಾಗೂ ಅಧಿಕಾರದ ದುರಾಸೆಯೂ ಇಲ್ಲ. ನನಗೆ ಟಿಕೇಟ್ ತಪ್ಪಲು ಬಿ.ಎಲ್. ಸಂತೋಷ್ ಅವರೇ ಕಾರಣ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ತುರ್ತು ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿಜೆಪಿಯ ಹಲವು ನಾಯಕರಿಂದ ಬಹಳಷ್ಟು ನೋವು ಅನುಭವಿಸಿದ್ದೇನೆ. ನಾನು ಹಲವರ ಬಗ್ಗೆ ಮಾತನಾಡಬೇಕಿದೆ. ಆದರೆ, ನಾನು ಮಾತನಾಡಿದರೆ ಮುಂದೆ ನನಗೆ ಸಮಸ್ಯೆಯಾಗುತ್ತದೆ. ಆದರೂ ಮಾತನಾಡುತ್ತೇನೆ ಎಂದರು.
ಬಿ.ಎಲ್. ಸಂತೋಷ್ ಕಾರಣ!
ನನಗೆ ಟಿಕೇಟ್ ತಪ್ಪಲು ಬಿಜೆಪಿಯ ರಾಷ್ಟ್ರೀಯ ನಾಯಕ ಬಿ.ಎಲ್. ಸಂತೋಷ್ ಅವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ.
ಸಂತೋಷ್ ಅವರ ಮಾನಸ ಪುತ್ರ ಮಹೇಶ್ ಟೆಂಗಿನಕಾಯಿ ಅವರಿಗೆ ಟಿಕೇಟ್ ಕೊಡಿಸುವ ಸಲುವಾಗಿ ನನಗೆ ಅನ್ಯಾಯ ಮಾಡಿದರು ಎಂದು ಕಿಡಿ ಕಾರಿದ ಅವರು, ಒಬ್ಬ ವ್ಯಕ್ತಿಯಿಂದಾಗಿ ನನ್ನನ್ನು ಪಕ್ಷದಿಂದ ಹೊರಹಾಕಲಾಯಿತು ಎಂದರು.
ಬಿ.ಎಲ್. ಸಂತೋಷ್ ಬಗ್ಗೆ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ಗಮನಕ್ಕೂ ಸಹ ತಂದಿದ್ದೆ. ಆದರೆ, ಅದನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಳ್ಳದಷ್ಟು ಸಂತೋಷ್ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದರು.
ನಾನು ಅವಕಾಶವಾದಿಯಲ್ಲ ಹಾಗೂ ಅಧಿಕಾರದ ದುರಾಸೆಯೂ ಸಹ ಇಲ್ಲ. ಟಿಕೇಟ್’ಗಾಗಿ ಬಿಜೆಪಿ ಹೈಕಮಾಂಡ್’ಗೆ ಕಾಡಿಬೇಡಿದೆ. ನನಗೆ ಟಿಕೇಟ್ ಸಿಗಬೇಕು ಎಂಬ ವಿಚಾರವಲ್ಲ. ಆದರೆ, ಇದು ನನ್ನ ಮರ್ಯಾದೆ ಹಾಗೂ ಸ್ವಾಭಿಮಾನದ ಪ್ರಶ್ನೆ. ಹೀಗಾಗಿ, ಬಿಜೆಪಿಯಿಂದ ಕಾಂಗ್ರೆಸ್’ಗೆ ಬರಬೇಕಾಯಿತು ಎಂದರು.
ನಮ್ಮ ಭಾಗದಲ್ಲಿ ಹುನಗುಂದ ಉಪಚುನಾವಣೆಯಿಂದ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿತು. 15 ದಿನ ಪ್ರಚಾರ ಮಾಡಿ 2ನೆಯ ಸ್ಥಾನಕ್ಕೆ ಪಕ್ಷವನ್ನು ತಂದೆ. ಮಂಗಳಾ ಅಂಗಡಿ ಅವರ ಗೆಲುವಿನಲ್ಲಿ ನನ್ನದೇ ಪಾತ್ರ ಅತಿ ದೊಡ್ಡದು. 25 ಸಾವಿರ ಅಂತರದಲ್ಲಿ ಗೆಲುವು ಸಾಧಿಸಿದ್ದು, ಯಾವುದೇ ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣದಲ್ಲಿದ್ದೇನೆ. ಆದರೆ, ನನ್ನೆಲ್ಲಾ ಸಾಧನೆ ಬದಿಗಿಟ್ಟು ಟಿಕೇಟ್ ನಿರಾಕರಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಸ್ಕ್ರೀನಿಂಗ್ ಕಮಿಟಿಯಲ್ಲೂ ಸಹ ನನ್ನ ಹೆಸರಿತ್ತು. ಆದರೆ, ಸಂಸದೀಯ ಮಂಡಳಿಯ ಸಭೆಯಲ್ಲಿ ಅದು ಏನು ಚರ್ಚೆಯಾಯಿಯೋ ನನಗೆ ಗೊತ್ತಿಲ್ಲ. ಆದರೆ, ಆನಂತರ ಟಿಕೇಟ್ ನಿರಾಕರಿಸಿ, ರಾಜಕೀಯ ನಿವೃತ್ತಿ ಎಂಬ ಮೂರು ಸಾಲಿನ ಪತ್ರಕ್ಕೆ ಸಹಿ ಹಾಕಲು ಹೇಳಿದರು. ನಾನು ಅವರು ಹೇಳಿದಂತೆ ಸಹಿ ಹಾಕುತ್ತೇನೆ ಎಂದುಕೊಂಡಿದ್ದರು. ಆದರೆ, ಇದು ನನ್ನ ಮರ್ಯಾದೆ ಪ್ರಶ್ನೆ. ಹೀಗಾಗಿ, ಇಂತಹ ನಿರ್ಧಾರ ಕೈಗೊಂಡೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















