ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ರಾಜ್ಯದಲ್ಲಿ ಮತ್ತೊಂದು ದುರಂತ ನಡೆದಿದ್ದು, ಜಿಲ್ಲೆಯಲ್ಲಿ 2 ವರ್ಷದ ಕಂದವೊಂದು ಕೊಳವೆ ಬಾವಿಗೆ #Borewell ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಜಿಲ್ಲೆಯ ಇಂಡಿ ತಾಲೂಕಿನ ಲಚ್ಚಾಣ ಗ್ರಾಮದಲ್ಲಿ ದುರಂತ ಸಂಭವಿಸಿದ್ದು, ಆಟವಾಡುತ್ತಿದ್ದ ಕೂಸು ಸಾತ್ವಿಕ್ ಆಯತಪ್ಪಿ ಕೊಳವೆ ಬಾವಿಯೊಳಕ್ಕೆ ಬಿದ್ದಿದೆ.
ಮಗು ಸುಮಾರು 16 ಅಡಿ ಆಳದಲ್ಲಿ ಸಿಲುಕಿದ್ದು, ಎಸ್’ಡಿಆರ್’ಎಫ್ ತಂಡ ಸಂಜೆಯಿಂದಲೇ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಸುತ್ತಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
Also read: ಜಪಾನ್: ತೈವಾನ್‌ನಲ್ಲಿ ಪ್ರಬಲ ಭೂಕಂಪ | ನಾಲ್ವರು ಸಾವು
ಮಗುವನ್ನು ಗಮನಿಸಲು ಕ್ಯಾಮೆರಾವನ್ನು ಕೊಳವೆ ಬಾವಿಯೊಳಕ್ಕೆ ಇಳಿಸಲಾಗಿದ್ದು, ಉಸಿರಾಡಲು ಅವಶ್ಯಕವಾದ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ.
ಹಲವು ಜೆಸಿಬಿ, ಹಿಟ್ಯಾಚಿ ವಾಹನಗಳ ಮೂಲಕ ಪರ್ಯಾಯವಾಗಿ ರಂಧ್ರ ಕೊರೆಯಲಾಗುತ್ತಿದ್ದು, ಬೃಹತ್ ಗಾತ್ರದ ಬಂಡೆ ಅಡ್ಡ ಬಂದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಕೊಂಚ ತಡವಾಗಿದೆ ಎಂದು ಹೇಳಲಾಗಿದೆ.
ಕೂಸಿನ ರಕ್ಷಣೆಗಾಗಿ ರಕ್ಷಣಾ ಸಿಬ್ಬಂದಿ ಎಲ್ಲ ರೀತಿಯ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ಮಗುವಿನ ತಂದೆ ಸತೀಶ ಮುಜಗೊಂಡ, ತಾಯಿ ಪೂಜಾ ಮುಜಗೊಂಡ. ಸತೀಶ ಅವರ 4 ಎಕರೆ ಜಮೀನಿನಲ್ಲಿ ಬೋರ್‌ವೆಲ್ ಕೊರೆಯಲಾಗಿತ್ತು. ಆದರೆ ಕೊಳವೆ ಬಾವಿ ಮುಚ್ಚಿರುವ ಕೆಲಸ ಮಾಡಿರಲಿಲ್ಲ. ಮಗು ಆಟವಾಡಲು ಹೋಗಿದ್ದಾಗ ಕೊಳವೆ ಬಾವಿಗೆ ಬಿದ್ದಿದೆ. ಕಬ್ಬು, ಲಿಂಬೆಗೆ ನೀರಿಲ್ಲ ಎಂದು ಬೋರ್ ಹೊಡೆಸಲಾಗಿತ್ತು. 400 ಅಡಿ ವರೆಗೂ ಬಾವಿ ಕೊರೆಸಲಾಗಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















