ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಸಾಹಿತಿ, ಲೇಖಕಿ ಡಾ. ಕಮಲಾ ಹಂಪನಾ #Kamala Hampana (89) ಅವರು ಹೃದಯಾಘಾತದಿಂದ ಇಂದು ಮುಂಜಾನೆ ನಿಧನ ಹೊಂದಿದ್ದಾರೆ.
ಅವರು ಹಿರಿಯ ಸಾಹಿತಿ, ಸಂಶೋದಕರಾಗುವ ಪತಿ ಡಾ ಹಂ.ಪ.ನಾಗರಾಜಯ್ಯ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನುಅಗಲಿದ್ದಾರೆ.
ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಪುತ್ರಿ ಡಾ. ಆರತಿ ಮನೆಯಲ್ಲಿ ವಾಸವಿದ್ದರು. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ ಆಗಿತ್ತು. ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ರಾಜಾಜಿನಗರದ ಅವರ ನಿಮಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿದೆ.
ಕಮಲಾ ಹಂಪನಾ ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿದ್ದು, ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರಿಗೆ ಕರ್ನಾಟಕ ಸರ್ಕಾರ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ ಲಭಿಸಿದೆ.
ಕಮಲಾ ಹಂಪನಾ ಅವರ ಸುಮಾರು 60ಕ್ಕೂ ಹೆಚ್ಚು ಕೃತಿಗಳು ಇದುವರೆಗೆ ಪ್ರಕಟವಾಗಿದ್ದು, ಇದರಲ್ಲಿ ಸೃಜನಕೃತಿಗಳೂ ಇವೆ. ಬಿಂದಲಿ, ಬುಗುಡಿ ಹಾಗೂ ಬಯಲು ಇವು ಕಮಲಾ ಹಂಪನಾ ಅವರ ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas, Jainism and Other Essays ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ಬರೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post