ಕಲ್ಪ ಮೀಡಿಯಾ ಹೌಸ್ | ತುಮಕೂರು |
ಭಾರತದ ಹಳ್ಳಿಗಳ, ಜನಸಾಮಾನ್ಯರ ಜೀವನಾಡಿಯಾದ ರೈಲಿನ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ವತಿಯಿಂದ ನಗರದ ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಭಾನುವಾರ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ವೇದಿಕೆಯ ದಶಕದ ಸಂಭ್ರಮದ ಅಂಗವಾಗಿ ವಿದ್ಯಾರ್ಥಿಗಳಲ್ಲಿ ರೈಲಿನ ಬಗ್ಗೆ ಆಸಕ್ತಿ ಮೂಡಿಸಲು ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ತುಮಕೂರು ನಗರ ವ್ಯಾಪ್ತಿಯ ಹಲವಾರು ಶಾಲೆಗಳಿಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಎಂಪ್ರೆಸ್ ಪ್ರೌಢಶಾಲೆಯಲ್ಲಿ ನಡೆದ ಸ್ಪರ್ಧೆಗೆ ನಿಗದಿತ ಸಮಯಕ್ಕೆ ಮುಂಚೆಯೇ ಆಗಮಿಸಿದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಅತ್ಯುತ್ಸಾಹದಿಂದಲೇ ಭಾಗವಹಿಸಿದ್ದರು. ಸ್ಪರ್ಧೆಯ ನಂತರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಸ್ಥಳದಲ್ಲೇ ವಿತರಿಸಲಾಯಿತು.
“ರೈಲು ಪ್ರಯಾಣದ ಅನುಭವ ಮತ್ತು ಪ್ರಯಾಣದಲ್ಲಿ ಸುರಕ್ಷತೆ” ವಿಷಯವಾಗಿ ಪ್ರಬಂಧ ಸ್ಪರ್ಧೆ ಮತ್ತು “ನನ್ನ ರೈಲು” ವಿಷಯವಾಗಿ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು.
ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರೊಂದಿಗೆ ಆಗಮಿಸಿದ ವಿದ್ಯಾರ್ಥಿಗಳು ರೈಲಿನ ಬಗ್ಗೆ ಚಿತ್ರಕಲೆ ರಚಿಸುವ ಮೂಲಕ ರೈಲಿನ ಬಗ್ಗೆ ತಮಗಿರುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ಈ ತಿಂಗಳ ಕೊನೆಯ ವೇಳೆಗೆ ಫಲಿತಾಂಶ ಪ್ರಕಟಿಸಲಾಗುತ್ತದೆ. ವಿಜೇತರಿಗೆ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ವೇದಿಕೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post