ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಮಾದಕ ದ್ರವ್ಯ, ಸೈಬರ್ ಹಾಗೂ ಅಪ್ರಾಪ್ತರಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಾನೂನು ಕಟ್ಟುನಿಟ್ಟಾಗಿದ್ದು ಮಕ್ಕಳು ಕಾನೂನಿನ ಅರಿವಿನಲ್ಲಿ ಬದುಕಬೇಕು ಎಂದು ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಚೇರಿಯ ಸಂತೋಷ್ ಹೇಳಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ರೋಟರಿ ಕ್ಲಬ್ ಕಾರ್ಕಳ, ಕ್ರೈಸ್ಟ್‌ಕಿಂಗ್ ಇಂಟರ್‍ಯಾಕ್ಟ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಮೊಬೈಲ್, ಸೈಬರ್ ಕ್ರೈಂ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಾದಕ ದ್ರವ್ಯ ಸೇವನೆಯ ವಿಷಯವು ದೇಶದ ಮುಂದಿರುವ ಪ್ರಮುಖ ಸವಾಲಾಗಿದೆ, ಪೋಷಕರು ತಮ್ಮ ಮಕ್ಕಳ ವರ್ತನೆಯ ಬಗ್ಗೆ ತೀವ್ರ ಗಮನ ಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ರೊ.ಇಕ್ಬಾಲ್ ಅಹಮದ್ ಅವರು ವಹಿಸಿದ್ದರು. ರೋಟರಿ ಕ್ಲಬ್ ಕಾರ್ಕಳದ ಕಾರ್ಯದರ್ಶಿ ರೊ. ಗಣೇಶ್ ಸಾಲ್ಯಾನ್, ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ ಕಾಮತ್, ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಸಂಸ್ಥೆಯ ಇಂಟರ್‍ಯಾಕ್ಟ್ ಅಧ್ಯಕ್ಷ ಒಂಬತ್ತನೇ ತರಗತಿಯ ಅನುಷ್ ಡಿ ಶೆಟ್ಟಿ, ಕಾರ್ಯದರ್ಶಿ ಒಂಬತ್ತನೇ ತರಗತಿಯ ವಿಶೋನ್ ಶೆಲ್ಟನ್ ಸಲ್ಡಾನ್ಹ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಕಾರ್ಕಳ ರೋಟರಿ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಶ್ರೀಮತಿ ಆಶಾ ಜ್ಯೋತಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post