ಕಲ್ಪ ಮೀಡಿಯಾ ಹೌಸ್ | ಕೋಲಾರ |
ವಕ್ಫ್ ಅಧಿಕಾರಿಗಳು ರೈತರ ಬಳಿ ಬಂದರೆ ಜಮೀನಿಗೆ ಕಾಲಿಡಲು ಬಿಡಬಾರದು. ರೈತರಿಗೆ ನೋಟಿಸ್ ಬಂದರೆ ಕೂಡಲೇ ಅದನ್ನು ಬಿಜೆಪಿ ಮುಖಂಡರಿಗೆ ತಿಳಿಸಬೇಕು. ರೈತರ ಪರವಾಗಿ ನಾವು ಸದಾ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ವಕ್ಫ್ ಮಂಡಳಿ #Waqf Board ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
10 ಸಾವಿರ ಕೋಟಿ ರೂಪಾಯಿಯನ್ನು ಮುಸ್ಲಿಮರಿಗೆ ನೀಡುತ್ತೇನೆ ಎಂದು ಕಾಂಗ್ರೆಸ್ ಘೋಷಿಸಿತ್ತು. ಅವರ ಮತ ಗಳಿಸಲು ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ. ಈಗ ವಕ್ಫ್ ಮೂಲಕ ಕಾಂಗ್ರೆಸ್ ರೈತರ ಜಮೀನು ಕಬಳಿಸುತ್ತಿದೆ. ಕೆಎಸ್‌ಆರ್‌ಟಿಸಿಯ ಸ್ಲೀಪ್ ಲೈಕ್ ಎ ಬೇಬಿ ಎಂಬಂತೆ, ಮುಸ್ಲಿಂ ಮೂಲಭೂತವಾದಿಗಳು ಹಾಗೂ ಭಯೋತ್ಪಾದಕರು ಕರ್ನಾಟಕದಲ್ಲಿ ಆರಾಮವಾಗಿ ನಿದ್ರಿಸುವ ವಾತಾವರಣ ಸೃಷ್ಟಿಯಾಗಿದೆ ಎಂದರು.
ಮುಸ್ಲಿಮ್ ಗಲಭೆಕೋರರು ಪೊಲೀಸ್ ಠಾಣೆಗೆ ನುಗ್ಗಿ ಹಲ್ಲೆ ಮಾಡಿದ್ದರು. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದನ್ನು ಕೂಡ ವಾಪಸ್ ಪಡೆದು ಮುಸ್ಲಿಮರನ್ನು ಮೆಚ್ಚಿಸಲು ಸಿಎಂ ಸಿದ್ದರಾಮಯ್ಯ ಯತ್ನಿಸಿದ್ದಾರೆ. ಮುಡಾ ಹಗರಣದ ನಂತರವಂತೂ ಪ್ರತಿ ದಿನ ಹಣೆಗೆ ಕುಂಕುಮ ಇಡುತ್ತಿದ್ದಾರೆ. ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ಅವರೇ ಬೊಟ್ಟು ಇಟ್ಟುಕೊಂಡಿದ್ದಾರೆ. ಮಾಧ್ಯಮದವರು ಮುಡಾ ಹಗರಣದ ಬಗ್ಗೆ ಪ್ರಶ್ನೆ ಮಾಡಿದರೆ, ಅವನು ಬಿಜೆಪಿ ಏಜೆಂಟಾ ಎಂದು ಪ್ರಶ್ನೆ ಮಾಡುತ್ತಾರೆ. ಸಿದ್ದರಾಮಯ್ಯನವರು ನಮ್ಮ ಮುಂದೆ ಟೋಪಿ ಇಡುವುದಿಲ್ಲ. ಆದರೆ ರೈತರ ಮುಂದೆ ಹೋಗಿ ಟೋಪಿ ಹಾಕಿದ್ದಾರೆ ಎಂದು ಟೀಕಿಸಿದರು.
Also read: ಗಮನಿಸಿ! ನ.6ರಂದು ಕುಂಸಿ ಸುತ್ತಮುತ್ತಲಿನ ಈ ಗ್ರಾಮಗಳಲ್ಲಿ ಕರೆಂಟ್ ಇರುವುದಿಲ್ಲ
ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿರುವಾಗ ನೋಟಿಸ್ ವಾಪಸ್ ಪಡೆದರೆ, ಕೇಸು ಬಿದ್ದುಹೋಗುವುದಿಲ್ಲ. ಅದೇ ರೀತಿ ವಕ್ಫ್ ನೋಟಿಸ್ ವಾಪಸ್ ಮಾಡಿದರೆ ಸಮಸ್ಯೆ ಮುಗಿಯುವುದಿಲ್ಲ. ರಾಜ್ಯದ ಪ್ರತಿಯೊಬ್ಬರೂ ತಮ್ಮ ಆಸ್ತಿಯ ಪಹಣಿಯನ್ನು ಪರಿಶೀಲಿಸಿಕೊಳ್ಳಬೇಕು. ಕೋಲಾರದ ಗಣೇಶನ ದೇವಸ್ಥಾನವೇ ವಕ್ಫ್ ಅಡಿಯಲ್ಲಿ ಬರುತ್ತದೆ. ಮಾರಮ್ಮನ ಗುಡಿ ಹೋಗಿ ಈಗ ವಕ್ಫ್ ಗುಡಿ ಆಗುತ್ತದೆ. ಯಾವುದೇ ಕಾರಣಕ್ಕೂ ಹಿಂದೂಗಳ ಜಾಗ ವಕ್ಫ್‌ಗೆ ಹೋಗಲು ಬಿಡುವುದಿಲ್ಲ, ಕಾಲಂ 11 ರಲ್ಲಿ ವಕ್ಫ್ ಬೋರ್ಡ್ ಎಂಬುದನ್ನು ತೆಗೆದುಹಾಕಬೇಕು. ನಮ್ಮ ಪ್ರಾಣವನ್ನಾದರೂ ಕೊಟ್ಟು ರೈತರ ಜಮೀನು ಉಳಿಸುತ್ತೇವೆ ಎಂದರು.
ಸಿಬಿಐ ತನಿಖೆಗೆ ವಹಿಸಿ
ವಕ್ಫ್ ನಲ್ಲಿ ಭೂಮಿ ಲೂಟಿಯಾಗಿದ್ದರೆ ಅದನ್ನು ಸಿಬಿಐ ತನಿಖೆಗೆ ವಹಿಸಲಿ. ಕಾಂಗ್ರೆಸ್ ಪಕ್ಷದಲ್ಲೇ ನೂರೆಂಟು ಸಮಸ್ಯೆಗಳಿವೆ. ಅದನ್ನು ನೋಡುವುದು ಬಿಟ್ಟು ಇದಕ್ಕೆ ಬಿಜೆಪಿ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ. ಜಮೀನು ಲೂಟಿಯನ್ನು ಸಿಬಿಐಗೆ ವಹಿಸಿದರೆ ಸತ್ಯಾಂಶ ಹೊರಬರಲಿದೆ ಎಂದರು.
ರೈತರಿಗೆ ಕನ್ನ
ಅನ್ನ ಕೊಡುವ ರೈತನಿಗೆ ಕನ್ನ ಹಾಕುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಸಚಿವ ಜಮೀರ್ ಅಹ್ಮದ್ ಅವರು ಅಧಿಕಾರಿಗಳ ಮುಂದೆ ಹೋಗಿ, ಎಲ್ಲ ಆಸ್ತಿಗಳನ್ನು ವಕ್ಫ್ ಬೋರ್ಡ್‌ಗೆ ಸೇರಿಸಿ ರೈತರನ್ನು ಹೊರಕ್ಕೆ ತಳ್ಳಬೇಕೆಂದು ಸೂಚನೆ ನೀಡಿದ್ದಾರೆ. ವಕ್ಫ್ ಬೋರ್ಡ್‌ನ ನಿರ್ದೇಶಕರಾಗಿದ್ದವರು ವಿಧಾನಸೌಧವೇ ನಮ್ಮದು ಎಂದಿದ್ದಾರೆ. ಇನ್ನೂ ಕೆಲ ಮುಖಂಡರು ಸಂಸತ್ತು ನಮ್ಮದು ಎಂದಿದ್ದಾರೆ. ಇಷ್ಟಾದರೂ ಸಚಿವರಾಗಲೀ, ಮುಖ್ಯಮಂತ್ರಿಯಾಗಲೀ ಇದರ ವಿರುದ್ಧ ಧ್ವನಿ ಎತ್ತಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಹಿಂದೆ ಮುಸ್ಲಿಮರಿಗಾಗಿ ಶಾದಿ ಭಾಗ್ಯ ನೀಡಿದ್ದರು. ಅಂದರೆ ಬೇರೆ ಧರ್ಮದಲ್ಲಿ ಬಡವರೇ ಇಲ್ಲ ಎಂದರ್ಥ. ಇದೇ ರೀತಿ ಮಾಡಿ ರಾಜ್ಯವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಇದು ನಾಡಪ್ರಭು ಕೆಂಪೇಗೌಡರು ಕಟ್ಟಿದ ನಾಡು. ಇದನ್ನು ಪಾಕಿಸ್ತಾನವಾಗಲು ಬಿಡಲ್ಲ. ಅಂಬೇಡ್ಕರ್ ಸಂವಿಧಾನ ಬೇಕಿದ್ದವರು ಮಾತ್ರ ಈ ರಾಜ್ಯದಲ್ಲಿ ಇರಬೇಕು. ಷರಿಯಾ ಕಾನೂನು ಬೇಕು ಎನ್ನುವವರು ಪಾಕಿಸ್ತಾನಕ್ಕೆ ಹೋಗಬೇಕು. ಕಾಂಗ್ರೆಸ್ ಸರ್ಕಾರ ನಗರ ನಕ್ಸಲರನ್ನು ಬಳಸಿಕೊಂಡಿದ್ದು, ಇವರು ಎಲ್ಲದಕ್ಕೂ ಸಂವಿಧಾನ ರಕ್ಷಣೆ ಎಂದು ಹೇಳುತ್ತಾರೆ ಎಂದು ಹೇಳಿದರು.
ವಕ್ಫ್ ಬೋರ್ಡ್ ಎಂಬ ಬೆಂಕಿ ರಾಕ್ಷಸ ಕರ್ನಾಟಕಕ್ಕೆ ಬಂದಿದೆ. ಅದಕ್ಕೆ ಊಟ, ಬಟ್ಟೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಆದರೆ ರೈತರು ಹೆದರಬೇಕಿಲ್ಲ. ಯಾವುದೇ ರೈತರಿಗೆ ನೋಟಿಸ್ ಬಂದರೆ ಅದನ್ನು ಬಿಜೆಪಿಗೆ ತಿಳಿಸಿದರೆ ಅವರ ಪರವಾಗಿ ಹೋರಾಟ ಮಾಡುತ್ತೇವೆ. ರೈತರ ಪರವಾಗಿ ಸದಾ ನಾವು ಇದ್ದೇವೆ. ರೈತರು ವಕ್ಫ್ ಅಧಿಕಾರಿಗಳನ್ನು ಜಮೀನಿಗೆ ಬಿಡಬಾರದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಲವ್ ಜಿಹಾದ್ ಮುಗಿದು ಲ್ಯಾಂಡ್ ಜಿಹಾದ್ ಬಂದಿದೆ. ಕರ್ನಾಟಕವೀಗ ಮತಾಂಧರಿಗೆ ಸ್ಲೀಪರ್ ಸೆಲ್ ಆಗಿದೆ. ನೋಟಿಸ್ ನೀಡಿದ ಅಧಿಕಾರಿಗಳನ್ನು ಸರ್ಕಾರ ಒದ್ದು ಜೈಲಿಗೆ ಹಾಕಲಿ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post