ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಡಿಸೆಂಬರ್ 20, 21, 22ರಂದು ಮೂರು ದಿನಗಳ ಕಾಲ ಮಂಡ್ಯ ನಗರದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಡೀ ಇಂಡಿಯಾದಲ್ಲಿ ಹೆಸರಾಗಬೇಕು. ಸಮ್ಮೇಳನದಲ್ಲಿ ಎಲ್ಲಾ ವರ್ಗದ ಕಲಾವಿದರಿಗೂ ಅವಕಾಶ ಕಲ್ಪಿಸಬೇಕು ಎಂದು ಶಾಸಕರು ಹಾಗೂ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಸಮನ್ವಯ ಸಮಿತಿ ಅಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.
ನಗರದ ಹೊರವಲಯದ ಅಮರಾವತಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತಿಹಾಸದಲ್ಲಿ ಉಳಿಯುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖಾಂತರ ಸಮ್ಮೇಳನ ಯಶಸ್ವಿಗೊಳಿಸಿ ಜಿಲ್ಲೆಯ ಹೆಸರನ್ನು ಎತ್ತಿಯಿಡಿಯಬೇಕು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲಾ ವರ್ಗದವರಿಗೆ ಸಮಾನ ಅವಕಾಶ ನೀಡಬೇಕು. ಅವಕಾಶ ವಂಚಿತರಿಗೂ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಸ್ಥಳೀಯ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.
ನೋಂದಣಿಯಾಗಿರುವ ಕಲಾವಿದರ ಪಟ್ಟಿಯನ್ನು ಅಂತಿಮಗೊಳಿಸಿ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾಗಿರುವುದರಿಂದ ದೇಶದ ನಾನಾ ಭಾಗದ ಕಲಾ ಪ್ರದರ್ಶನಕ್ಕೆ ಅವಕಾಶ ನೀಡುವುದರ ಜೊತೆಗೆ 31 ಜಿಲ್ಲೆಯ ಮುಖ್ಯ ಕಲಾಪ್ರಕಾರಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಕಲಾವಿದರಿಗೆ ಸೂಕ್ತರೀತಿಯಲ್ಲಿ ಊಟ, ವಸತಿ ವ್ಯವಸ್ಥೆಯಾಗಬೇಕು. ಒಂದು ಸಂಘಟನೆಯಾಗಿ ಕೆಲಸ ಮಾಡಬೇಕು. ಮುಖ್ಯದ್ವಾರದಿಂದ ಗಣ್ಯರನ್ನು ಮಂಗಳವಾದ್ಯದ ಜೊತೆಯಲ್ಲಿ ಕರೆತರಬೇಕು. ತಮಟೆ, ನಗಾರಿ ತಂಡಗಳಿಂದ ಸ್ವಾಗತಿಸಬೇಕು. ಸಮ್ಮೇಳನ ಆರಂಭಕ್ಕೂ ಎರಡು ದಿನ ಮೊದಲೇ ನಗರದಲ್ಲಿ ನಾಟಕ, ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಮೂಲಕ ಡಿಸೆಂಬರ್ 18ರಿಂದಲೇ ಸಾಹಿತ್ಯ ಸಮ್ಮೇಳನ ಹಬ್ಬದ ಆಚರಣೆ ಆರಂಭವಾಗಬೇಕು ಎಂದು ಕರೆಕೊಟ್ಟರು.
ಸಾಂಸ್ಕೃತಿಕ ಸಮಿತಿ ಉಪಾಧ್ಯಕ್ಷರಾದ ಪ್ರೊ.ಜಯಪ್ರಕಾಶ್ ಗೌಡ ಅವರು ಮಾತನಾಡಿ, ಕಲಾವಿದರ ಆಯ್ಕೆಗೆ ಮಾನದಂಡ ನಿಗದಿಗೊಳಿಸಬೇಕು. ಸ್ಥಳೀಯ ಕಲಾತಂಡಗಳಿಗೆ ಪ್ರಾತಿನಿಧ್ಯ ನೀಡಬೇಕು. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಬೇಕು. ಕಲಾವಿದರಿಗೆ ಗೌರವಧನ ಹೆಚ್ಚಿಸಬೇಕು ಎಂದರು.
ಕಲಾಮಂದಿರ, ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು. ಸ್ಥಳೀಯ ಕಲಾವಿದರ ಜೊತೆ ರಾಜ್ಯದ ಕಲಾವಿದರ ಸಮನ್ವಯತೆ ಕಾಯ್ದುಕೊಂಡು ವೇದಿಕೆ ಹಂಚಿಕೆಯಾಗಬೇಕು ಎಂದು ಹೇಳಿದರು.
ನಾಡಗೀತೆ, ನಾಲ್ವಡಿ ಕೃಷ್ಣರಾಜ ಒಡೆಯರ್, ರೈತಗೀತೆ ಇರಬೇಕು. ಸ್ಥಳೀಯ ಕಲಾವಿದರೇ ಹಾಡಬೇಕು. ಕನ್ನಡ ಸಾಹಿತ್ಯ ಪರಿಷತ್ ಗೆ ಶಂಕರೇಗೌಡರು, ಜಿ.ನಾರಾಯಣ್ ಅವರುಗಳ ಕೊಡುಗೆ ಸಾಕಷ್ಟಿದೆ. ಸಮ್ಮೇಳನದ ಸ್ಥಳಗಳಲ್ಲಿ ನಿರ್ಮಿಸುವ ಮಹಾದ್ವಾರಗಳಿಗೆ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸೇರಿದಂತೆ ಮಂಡ್ಯ ಜಿಲ್ಲೆಯ ಮಹನೀಯರ ಹೆಸರಿಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ, ಸ್ಥಳೀಯ ಕಲಾವಿದರಿಗೆ ಪ್ರಾತಿನಿಧ್ಯ ನೀಡಲು ಸಮಿತಿಯವರು
ಮಾನದಂಡ ನಿಗದಿಪಡಿಸಿ ತೀರ್ಮಾನ ಕೈಗೊಳ್ಳಬೇಕು. ಪಾರದರ್ಶಕ ನಿಯಮ, ಮಾನದಂಡಗಳನ್ನು ಅನುಸರಿಸಿ ಎಲ್ಲಾ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು ಎಂದರು.
ಮೂರು ವೇದಿಕೆಗಳಲ್ಲಿ ವಿವಿಧ ವಿಚಾರ ಗೋಷ್ಠಿ ಮುಗಿದ ನಂತರ ಕಾರ್ಯಕ್ರಮಕ್ಕೆ ಅವಕಾಶ ಸಿಗಲಿದೆ. ಅಂಬೇಡ್ಕರ್ ಭವನ, ಕಲಾಮಂದಿರದಲ್ಲಿ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳಿಗೆ ಅವಕಾಶ ಸಿಗಲಿದೆ ಎಂದರು.
ಸಭೆಯಲ್ಲಿ ಮೈಸೂರು ವಿಭಾಗದ ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಕಸಾಪ ಜಿಲ್ಲಾ ಸಂಚಾಲಕರಾದ ಮೀರಾ ಶಿವಲಿಂಗಯ್ಯ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್, ಡಿಡಿಪಿಐ ಶಿವರಾಮೇಗೌಡರು
ಸೇರಿದಂತೆ ಉಪಸಮಿತಿಯ ಸಂಚಾಲಕರು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post