ಕಲ್ಪ ಮೀಡಿಯಾ ಹೌಸ್ | ಮಹಾರಾಷ್ಟ್ರ |
ನರೇಂದ್ರ ಮೋದಿಯವರು #Narendra Modi ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾ ನಾ ಖಾವೋಂಗಾ, ನಾ ಖಾನೆದೂಂಗಾ ಎನ್ನುತ್ತಾರೆ . ಹಾಗಾದರೆ ಆಪರೇಶನ್ ಕಮಲ ಮಾಡಲು ಹಣ ಎಲ್ಲಿಂದ ಬಂತು ಎಂದು ಸಿಎಂ ಸಿದ್ದರಾಮಯ್ಯ #CM Siddaramaiah ಪ್ರಶ್ನೆ ಮಾಡಿದರು.
ಅವರು ಇಂದು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ನಲ್ಲಿ ಇಂದು ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಲೋಕಸಭೆ ಉಪ ಚುನಾವಣಾ ಅಭ್ಯರ್ಥಿ ರವೀಂದ್ರ ಚೌಹಾನ್, ವಿಧಾನಸಭೆ ಚುನಾವಣಾ ಅಭ್ಯರ್ಥಿ ಹನುಮಂತರಾವ್ ಪಾಟೀಲ್ ಅವರ ಪರ ಮತ ಯಾಚಿಸಿದರು.
2008 ರಲ್ಲಿ ಎಂಟು ಶಾಸಕರನ್ನು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೊಂಡುಕೊಂಡರು. 2019 ರಲ್ಲಿ 17 ಜನ ಶಾಸಕರನ್ನು ಕೊಂಡರು. ಈ ಕೋಟ್ಯಾಂತರ ರೂಪಾಯಿ ಬಿಜೆಪಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಆಪರೇಷನ್ ಕಮಲ ಮೂಲಕ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ನಿದರ್ಶನಗಳಿವೆ. ಮಹಾರಾಷ್ಟ್ರದಲ್ಲಿ ಹಿಂದೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್, ಎನ್.ಸಿ.ಪಿ, ಶಿವಸೇನೆ ಸೇರಿ ಸರ್ಕಾರ ರಚನೆ ಮಾಡಿದ್ದರು. ಎಲ್ಲಾ ಕಡೆ ಆಪರೇಶನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದೆ. ಏಕನಾಥ ಶಿಂಧೆಯವರು ಶಿವಸೇನೆಯಲ್ಲಿ ಇದ್ದವರು. ಶಿವಸೇನೆಯನ್ನು ಒಡೆದು ಮತ್ತೊಂದು ಗುಂಪು ಮಾಡಿ ಅದಕ್ಕೆ ಬೆಂಬಲ ಕೊಟ್ಟು ಫಡ್ನವಿಸ್ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಅನೇಕ ಕಡೆಗಳಲ್ಲಿ ಬಿಜೆಪಿ ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ನಿದರ್ಶನಗಳಿವೆ ಎಂದರು.
ಕರ್ನಾಟಕದಲ್ಲಿಯೂ ಎರಡು ಬಾರಿ ಬಿಜೆಪಿ ಅಧಿಕಾರ ಮಾಡಿದೆ. ಒಮ್ಮೆಯೂ ಜನರ ಆಶೀರ್ವಾದವನ್ನು ಪಡೆದು ಅಧಿಕಾರಕ್ಕೆ ಬರಲಿಲ್ಲ. 2008 ನಲ್ಲಿ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಆಪರೇಶನ್ ಕಮಲ ಮಾಡಿ ಮುಖ್ಯಮಂತ್ರಿಯಾದರು. 2019 ಪುನ: ಯಡಿಯೂರಪ್ಪ ಮುಖ್ಯಮಂತ್ರಿಯಾದರು. 2018 ರಲ್ಲಿ ಅವರು ಸರ್ಕಾರ ರಚನೆಗೆ ಬೇಕಿದ್ದ ಸರಳ ಬಹುಮತ 113 ಸ್ಥಾನಗಳು. ಎರಡೂ ಬಾರಿಯೂ ಅವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ನರೇಂದ್ರ ಮೋದಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ
ನರೇಂದ್ರ ಮೋದಿಯವರು ಗ್ಯಾರಂಟಿ ಯೋಜನೆಗಳ ಬಗ್ಗೆ ಲೇವಡಿ ಮಾಡಿ ಮಾತನಾಡುತ್ತಾರೆ. ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕದಲ್ಲಿ ಘೋಷಣೆ ಮಾಡಿದಾಗ 5 ಗ್ಯಾರಂಟಿಗಳನ್ನೂ ಜಾರಿ ಮಾಡಲಾಗುವುದಿಲ್ಲ. ದೇಶದ ಅಭಿವೃದ್ದಿ ಕುಂಠಿತವಾಗುತ್ತದೆ. ಒಂದು ವೇಳೆ ಜಾರಿಯಾದರೆ ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು.
ನರೇಂದ್ರ ಮೋದಿ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದೇ ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ರಾಜಸ್ಥಾನ,ಮಧ್ಯಪ್ರದೇಶ, ಜಾರ್ಖಂಡ್, ಹರಿಯಾಣದಲ್ಲಿ ಘೋಷಣೆ ಮಾಡಿದರು. ಅವರು ಹೇಳುವುದು ಒಂದು ಮಾಡುವುದು ಇನ್ನೊಂದು. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದರು. ಮೋದಿಯವರು ಈ ರಾಜ್ಯಗಳಿಗೆ ತೆರಳಿ ಗ್ಯಾರಂಟಿಗಳ ಪರವಾಗಿ ಮಾತನಾಡಿದರು. ಇದರಿಂದ ಜನರ ಆರ್ಥಿಕ ಸಾಮಾಜಿಕ ಅಭಿವೃದ್ಧಿ ಸಾಧ್ಯ ಎನ್ನುತ್ತಾರೆ. ಇಂಥ ಗೊಂದಲದ ಹೇಳಿಕೆ ಕೊಡುವ ಮೂಲಕ ಈ ದೇಶದ ಜನರ ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಗ್ಯಾರಂಟಿ ಜಾರಿಯಾದ ರಾಜ್ಯಗಳಲ್ಲಿ ಆರ್ಥಿಕವಾಗಿ ದಿವಾಳಿಯಾಗಿಲ್ಲ
Also read: ಸಂಘಟನೆಯಾಗಿ ಕೆಲಸ ಮಾಡಿ ಸಮ್ಮೇಳನ ಯಶಸ್ವಿಗೊಳಿಸಿ: ಅಧ್ಯಕ್ಷ ದಿನೇಶ್ ಗೂಳಿಗೌಡ ಕರೆ
ಕರ್ನಾಟಕದಲ್ಲಿ ನಾವು 136 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದೆವು. 2023 ಮೇ 20 ರಂದು ಅಧಿಕಾರಕ್ಕೆ ಬಂದೆವು. ಆರು ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದೆವು. ತೆಲಂಗಾಣ ರಾಜ್ಯದಲ್ಲಿ ಚುನಾವಣಾ ಪೂರ್ವದಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜಾರಿ ಮಾಡಿದರು. ಹಿಮಾಚಲ ಪ್ರದೇಶದಲ್ಲಿಯಾಗಲಿ, ತೆಲಂಗಾಣದಲ್ಲಿ, ಕರ್ನಾಟಕದಲ್ಲಿ ಆರ್ಥಿಕವಾಗಿ ದಿವಾಳಿಯಾಗಿಲ್ಲ. ಕರ್ನಾಟಕ ರಾಜ್ಯದಲ್ಲಿ ಆರ್ಥಿಕ ದಿವಾಳಿಯಾಗಿಲ್ಲ. 56000 ಕೋಟಿ ರೂಪಾಯಿ ಗಳನ್ನು ವೆಚ್ಚ ಮಾಡುತ್ತಿದ್ದು , 3 ಲಕ್ಷದ 71 ಸಾವಿರ ಕೋಟಿ ರೂಪಾಯಿಗಳಲ್ಲಿ 1.20 ಲಕ್ಷ ಕೋಟಿ ರೂಪಾಯಿ ಗಳನ್ನು ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ.ಯಾವ ರಾಜ್ಯದಲ್ಲಿಯೂ ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಎಂದರು.
ಮಹಾ ವಿಕಾಸ ಆಘಾಡಿ ಅಧಿಕಾರಕ್ಕೆ ಬರುವ ಬಗ್ಗೆ ಸಂಪೂರ್ಣ ವಿಶ್ವಾಸ
ವಿಧಾನಸಭಾ ಚುನಾವಣೆಯಲ್ಲಿ ಮಹಾವಿಕಾಸ ಆಘಾಡಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಉದ್ಧವ್ ಠಾಕ್ರೆ, ಶರದ್ ಪವಾರ್ ಈ ಘೋಷಣೆ ಮಾಡಿದ್ದಾರೆ. ಈ ಮೂರು ಪಕ್ಷಗಳು ಮಹಾ ವಿಕಾಸ ಆಘಾಡಿ ಅಧಿಕಾರಕ್ಕೆ ಬರುವ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಹನುಮಂತ ರಾವ್ ಪಾಟೀಲ್ , ರವೀಂದ್ರ ಚೌಹಾನ್ ಲೋಕಸಭೆಗೆ ಗೆಡ್ಡೆ ಗೆಲ್ಲುತ್ತಾರೆ. ಮಹಾ ವಿಕಾಸ್ ಆಘಾಡಿ ಅಧಿಕಾರಕ್ಕೆ ಬಂದಾಗ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು. ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಡುವುದರಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇಂದ್ರಕ್ಕೆ 8 ಲಕ್ಷದ 88 ಸಾವಿರ ಕೋಟಿ ನೀಡುತ್ತದೆ. ಇಷ್ಟು ಕೊಟ್ಟರೂ1.30 ಸಾವಿರ ಕೋಟಿ ಮಾತ್ರ ವಾಪಸ್ ಬರುತ್ತದೆ. ನಿಮ್ಮ ತೆರಿಗೆಯಲ್ಲಿ 15 ಪೈಸೆ ಮಾತ್ರ ವಾಪಸ್ಸು ಕೊಡುತ್ತಾರೆ. ಕರ್ನಾಟಕದಿಂದ 4.50 ಲಕ್ಷ ತೆರಿಗೆ ಕೊಟ್ಟರೆ 60,000 ಕೋಟಿ ಮಾತ್ರ ವಾಪಸ್ಸು ಬರುತ್ತದೆ. ಕರ್ನಾಟಕದಲ್ಲಿ ಒಂದು ರೂಪಾಯಿಗೆ 13-14 ರೂಪಾಯಿ ಮಾತ್ರ ವಾಪಸ್ ಬರುತ್ತದೆ.ಇದನ್ನು ವಿರೋಧ ಮಾಡಬೇಕೋ ಬೇಡವೋ ಎಂದು ಪ್ರಶ್ನಿಸಿದರು.
ಗ್ಯಾರಂಟಿಗಳಿಗೆ ಹಣ ಸಿಗಬಾರದು ಎಂದು ತೆರಿಗೆಯಲ್ಲಿ ಅನ್ಯಾಯ
ನಮಗೆ ನ್ಯಾಯಯುತವಾಗಿ ಬರಬೇಕಾದ ತೆರಿಗೆಯಲ್ಲಿ ಮೋಸ ಮಾಡುತ್ತಿರುವುದು ಗ್ಯಾರಂಟಿಗಳಿಗೆ ಹಣ ಸಿಗಬಾರದು ಎಂದು. ಕರ್ನಾಟಕ, ತೆಲಂಗಾಣ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳು ಕೇಂದ್ರದ ಈ ನಿಲುವನ್ನು ವಿರೋಧಿಸಬೇಕೆಂದು ಕರೆ ನೀಡಿದರು. ನಿಮಗೆ ಇದನ್ನು ವಿರೋಧಿಸಬೇಕೆಂದರೆ ಬಿಜೆಪಿ ಸೋಲಿಸಿ, ಮಹಾ ವಿಕಾಸ ಅಘಾಡಿಯನ್ನು ಗೆಲ್ಲಿಸಬೇಕೆಂದರು.
ಬಿಜೆಪಿಗೆ ಸುಳ್ಳೇ ಮನೆದೇವರು
ಗೃಹ ಲಕ್ಷ್ಮೀ ಯೋಜನೆಗೆ ಹಣವಿಲ್ಲ ಎಂದು ಜಾಹೀರಾತು ನೀಡಿದ್ದರು. ಬಿಜೆಪಿಗೆ ಸುಳ್ಳೇ ಮನೆದೇವರು. ನಾವು ಯಾವ ರಾಜ್ಯಗಳಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿಲ್ಲ ಎಂದರು.
ಸಚಿವರಾದ ಕರ್ನಾಟಕದ ಎಂ.ಬಿ.ಪಾಟೀಲ್, ತೆಲಂಗಾಣದ ಉತ್ತಮ್ ಕುಮಾರ್ ರೆಡ್ಡಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post