ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ |
ಕೊರಿಯರ್’ನಲ್ಲಿ ಬಂದ ಹೇರ್ ಡ್ರೈಯರ್ ಸ್ಫೋಟಗೊಂಡು ಪರಿಣಾಮ ಮಹಿಳೆಯೊಬ್ಬರು ಎರಡೂ ಕೈಗಳು ಛಿದ್ರವಾಗಿರುವ ಭೀಕರ ಘಟನೆ ಜಿಲ್ಲೆಯ ಇಳಕಲ್’ನಲ್ಲಿ ನಡೆದಿದೆ.
ಗಾಯಗೊಳಗಾದ ಮಹಿಳೆಯನ್ನು ಮೃತ ಯೋಧನ ಪತ್ನಿ ಬಸಮ್ಮ ಯರನಾಳ ಎಂದು ಗುರುತಿಸಲಾಗಿದೆ.
ಘಟನೆ ನಡೆದಿದ್ದು ಹೇಗೆ?
ಕೊರಿಯರ್ ಒಂದರ ಮೂಲಕ ಶಶಿಕಲಾ ಎನ್ನುವವರ ಹೆಸರಿಗೆ ಹೇರ್ ಡ್ರೈಯರ್ ಬಂದಿದ್ದು, ಅವರ ಮೊಬೈಲ್’ಗೆ ಸಿಬ್ಬಂದಿ ಕರೆ ಮಾಡಿ ತೆಗೆದುಕೊಳ್ಳಲು ಹೇಳಿದ್ದಾರೆ. ಆದರೆ, ಶಶಿಕಲಾ ಅವರು ನಾನು ಊರಿನಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಆದರೆ, ಇದರಿಂದ ಸುಮ್ಮನಾಗದ ಕೊರಿಯರ್ ಸಿಬ್ಬಂದಿ ಪದೇ ಪದೇ ಶಶಿಕಲಾ ಅವರಿಗೆ ಕರೆ ಮಾಡಿ ಕೊರಿಯರ್ ಪಡೆದುಕೊಳ್ಳುವಂತೆ ಕಿರಿ ಕಿರಿ ಮಾಡಿದ್ದಾರೆ. ಇದರಿಂದ ಬೇಸತ್ತ ಶಶಿಕಲಾ ಅವರು, ತಮ್ಮ ಸ್ನೇಹಿತೆ ಬಸಮ್ಮ ಅವರಿಗೆ ಕರೆ ಮಾಡಿ, ಯಾವುದೋ ಕೊರಿಯರ್ ಪಾರ್ಸಲ್ ಬಂದಿದೆ. ತೆಗೆದುಕೋ ಎಂದು ಕೇಳಿದ್ದಾರೆ. ಬಸಮ್ಮಾ ಅವರು ಕೊರಿಯರ್ ಸಿಬ್ಬಂದಿ ಬಳಿ ಪಾರ್ಸಲ್ ಪಡೆದಿದ್ದಾರೆ.
Also read: ಎಲ್ಲಾ ವ್ಯವಹಾರ ಕನ್ನಡದಲ್ಲಿಯೆ ನಡೆದಾಗ ಭಾಷೆಯ ಬಗೆಗಿನ ಆತಂಕ ದೂರ: ಎಸ್.ಎನ್. ನಾಗರಾಜ
ಪಡೆದುಕೊಂಡ ಪಾರ್ಸಲ್ ತೆರದು ನೋಡಿದಾಗ ಒಳಗಡೆ ಹೇರ್ ಡ್ರೈಯರ್ ಇತ್ತು. ಇದೇ ವೇಳೆ ಅಲ್ಲೇ ಇದ್ದ ಪಕ್ಕದ ಮನೆಯವರು ಆನ್ ಮಾಡಿ ತೋರಿಸಿ ಎಂದಿದ್ದಾರೆ. ಬಸಮ್ಮಾ ಅವರು ಹೇರ್ ಡ್ರೈಯರ್ ಸ್ವಿಚ್ ಹಾಕಿ ಆನ್ ಮಾಡಿದಾಗ ಸ್ಫೋಟಗೊಂಡಿದೆ.
ಹೇರ್ ಡ್ರೈಯರ್ ಭೀಕರವಾಗಿ ಸ್ಫೋಟಗೊಂಡ ಪರಿಣಾಮ ಬಸಮ್ಮ ಅವರ ಎರಡೂ ಹಸ್ತಗಳು ಛಿತ್ರಗೊಂಡಿದ್ದು, ಬೆರಳುಗಳು ಛಿದ್ರಗೊಂಡು, ಮನೆಯೆಲ್ಲಾ ರಕ್ತಸಿಕ್ತವಾಗಿವೆ.
ತಕ್ಷಣವೇ ಬಸಮ್ಮ ಅವರನ್ನು ಇಳಕಲ್’ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಇಳಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನ ಸೃಷ್ಠಿಸಿದ ಸ್ಫೋಟ
ಇನ್ನು, ಸ್ಪೋಟದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆದರೆ, ವರದಿಗಳಂತೆ, ಶಶಿಕಲಾ ಅವರು ಯಾವುದೇ ಹೇರ್ ಡ್ರೈಯರ್ ಆರ್ಡರ್ ಮಾಡಿಲ್ಲವಂತೆ. ಅವರ ಹೆಸರಿನಲ್ಲಿ ಪಾರ್ಸಲ್ ಬಂದಿದ್ದು ಹೇಗೆ, ಹಣ ನೀಡಿದ್ದು ಯಾರು ಎಂಬ ಪ್ರಶ್ನೆ ಮೂಡಿದೆ.
ಇನ್ನು, ಸ್ಫೋಟಗೊಂಡ ಹೇರ್ ಡ್ರೈಯರ್ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಯಾರಾಗಿದೆ ಎಂದು ಹೇಳಲಾಗಿದೆ. ಹೀಗಾಗಿ, ಈ ಸ್ಫೋಟ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post