ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದ ಸಾಹಸಸಿಂಹ, ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಹಾಗೂ ಇತ್ತೀಚೆಗೆ ಇಹಲೋಕ ತ್ಯಜಿಸಿದ ಹಿರಿಯ ನಟಿ ಬಿ. ಸರೋಜಾದೇವಿ ಅವರುಗಳಿಗೆ ಮರಣೋತ್ತರವಾಗಿ `ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಇಬ್ಬರೂ ಹಿರಿಯ ಕಲಾವಿದರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
ಸಚಿವ ಸಂಪುಟ ಸಭೆಯನ್ನು ಈ ಕುರಿತಂತೆ ತೀರ್ಮಾನ ಕೈಗೊಳ್ಳಲಾಗಿದ್ದು, ಇದರೊಟ್ಟಿಗೆ ರಾಷ್ಟ್ರಕವಿ ಕುವೆಂಪು ಅವರಿಗೆ `ಭಾರತ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನ ಮಾಡಲಾಗಿದೆ.
ಹಿರಿಯ ನಟಿ, ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್, ಅನಿರುದ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು.
ಅಲ್ಲದೇ, ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲಾ, ಶ್ರುತಿ, ಮಾಳವಿಕಾ ಅವಿನಾಶ್ ಅವರು ಕೂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು.
1972ರಲ್ಲಿ ವಿಷ್ಣುವರ್ಧನ್ ಅವರು ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ವರ್ಷ ಅವರು ನಟಿಸಿದ ವಂಶವೃP್ಷÀ, ನಾಗರಹಾವು ಸಿನಿಮಾಗಳು ಬಿಡುಗಡೆ ಆದವು. ಬಳಿಕ ಕನ್ನಡ ಚಿತ್ರರಂಗದಲ್ಲಿ ಅವರು ಭರವಸೆಯ ನಟನಾಗಿ ಬೆಳೆದರು. ಹಲವು ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡರು. ಅಭಿಮಾನಿಗಳ ಪಾಲಿಗೆ ಸಾಹಸ ಸಿಂಹ ಎನಿಸಿಕೊಂಡರು. ಚಿತ್ರರಂಗದಲ್ಲಿ ಅವರು ಮಾಡಿದ ಸಾಧನೆಯನ್ನು ಗುರುತಿಸಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















