ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಭಾರತೀಯ ರೈಲ್ವೆ ಹೊಸದಾಗಿ ಪರಿಚಯಿಸುತ್ತಿರುವ ವಂದೇ ಭಾರತ್ ಸ್ಲೀಪರ್ ರೈಲು ಭಾರೀ ಕುತೂಹಲ ಮೂಡಿಸಿದ್ದು, ಕರ್ನಾಟಕಕ್ಕೂ ಒಂದು ಕೊಡುಗೆ ದೊರೆತಿದೆ.
ಹೌದು… ಕರಾವಳಿ ಕರ್ನಾಟಕದ ಮಂಗಳೂರಿಂದ ತಿರುವನಂತಪುರಂವರೆಗೆ ಒಂದೇ ಭಾರತ್ ಸ್ಲೀಪರ್ ಸಂಚರಿಸಲಿದೆ.
ಭಾರತೀಯ ರೈಲ್ವೆ ತನ್ನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಆರಾಮದಾಯಕ, ಅತಿ ವೇಗದ ರಾತ್ರಿ ಪ್ರಯಾಣದ ಹೊಸ ಯುಗಕ್ಕೆ ಬಾಗಿಲು ತೆರೆದಿದೆ.
ಅತ್ಯಾಧುನಿಕ ವಿನ್ಯಾಸ, ಐಷಾರಾಮಿ ಸೌಕರ್ಯಗಳು ಮತ್ತು ಆಧುನಿಕ ಸುರಕ್ಷತಾ ವ್ಯವಸ್ಥೆಗಳೊಂದಿಗೆ, ಈ ರೈಲುಗಳನ್ನು ಭಾರತದ ರೈಲ್ವೆ ಆಧುನೀಕರಣದ ಮುಂದಿನ ದೊಡ್ಡ ಮುನ್ನಡೆ ಎಂದು ಪ್ರಶಂಸಿಸಲಾಗುತ್ತಿದೆ. ವಂದೇ ಭಾರತ್ ಸ್ಲೀಪರ್ ಅದರ ಪ್ರಾರಂಭಕ್ಕೂ ಮೊದಲೇ ಸಂಚಲನ ಸೃಷ್ಠಿಸಿದೆ.
ಕೇರಳ ಶೀಘ್ರದಲ್ಲೇ ತನ್ನ ಮೊದಲ ಸ್ಲೀಪರ್ ವಂದೇ ಭಾರತ್ ಸೇವೆಯನ್ನು ಸ್ವಾಗತಿಸಲು ಸಜ್ಜಾಗಿದ್ದು, ಪ್ರಮುಖವಾಗಿ ಮಂಗಳೂರು-ತಿರುವನಂತಪುರಂ ಮಾರ್ಗದಲ್ಲಿ ಸಂಚರಿಸಲು ಸಜ್ಜಾಗಿದೆ ಎಂಬುದು ಬಹುತೇಕ ಖಚಿತವಾಗಿದೆ.
ಕೇರಳದಲ್ಲಿ ಎರಡು ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಸ್ಲೀಪರ್ ರೈಲಿನ ಚೊಚ್ಚಲ ಪ್ರವೇಶದಿಂದ ಮೂರಕ್ಕೆ ಏರಿಕೆಯಾಗಲಿದೆ.
ಕೋಝಿಕ್ಕೋಡ್ ಸಂಸದ ಎಂ.ಕೆ. ರಾಘವನ್ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ನಡೆದ ಚರ್ಚೆಯ ಸಂದರ್ಭದಲ್ಲಿ ಮೂರು ಸ್ಲೀಪರ್ ಸೇವೆಗಳಿಗೆ ವಿನಂತಿ ಮಾಡಿದ್ದರು.
ಇದರಂತೆ,- ಬೆಂಗಳೂರು-ಕೋಝಿಕ್ಕೋಡ್, ಚೆನ್ನೈ-ಕೋಝಿಕ್ಕೋಡ್ ಮತ್ತು ಮಂಗಳೂರು-ತಿರುವನಂತಪುರಂ ಮಾರ್ಗದಲ್ಲಿ ರೈಲು ಸಂಚರಿಸಲಿದೆ ಎಂದು ವರದಿಯಾಗಿದೆ. ಪ್ರಮುಖವಾಗಿ, ಮಂಗಳೂರು-ತಿರುವನಂತಪುರಂ ಪ್ರಸ್ತಾವನೆಗೆ ಸಚಿವರು ಬೆಂಬಲ ವ್ಯಕ್ತಪಡಿಸಿದ್ದು, ಅನುಮೋದನೆ ಪಡೆಯುವ ಭರವಸೆ ಮೂಡಿಸಿದೆ.
ಈ ರೈಲು ರೈಲ್ವೆ ಸಚಿವಾಲಯದ ಅನುಮೋದನೆಯಾದರೆ, ಕಾಸರಗೋಡು, ಕೋಳಿಕ್ಕೋಡ್, ತ್ರಿಶೂರು, ಎರ್ನಾಕುಲಂ ಜಂಕ್ಷನ್, ಕೊಟ್ಟಾಯಂ, ತಿರುವಲ್ಲಾ, ಚೆಂಗನ್ನೂರು ಮತ್ತು ಕೊಲ್ಲಂ ಜಂಕ್ಷನ್’ನಂತಹ ನಗರಗಳನ್ನು ಮಂಗಳೂರು ಮತ್ತು ತಿರುವನಂತಪುರಂ ನಡುವೆ ಸಂಪರ್ಕಿಸಬಹುದು. ಅಂದಾಜು ಪ್ರಯಾಣ ದರವು ರೂ. 1,400 ರಿಂದ ರೂ. 4,000 ರವರೆಗೆ ಇರಬಹುದು ಎನ್ನಲಾಗಿದ್ದು, ಇನ್ನೂ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.
ಮಲಬಾರ್/ಕರಾವಳಿ ಪ್ರದೇಶದಲ್ಲಿ ರೈಲ್ವೆ ಸಂಪರ್ಕವನ್ನು ಹೆಚ್ಚಿಸಲು ಗೋವಾ-ಮಂಗಳೂರು ವಂದೇ ಭಾರತ್ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 20645/20646) ಅನ್ನು ಕೋಝಿಕೋಡ್ ವರೆಗೆ ವಿಸ್ತರಿಸಲು ರಾಘವನ್ ಸೂಚಿಸಿದ್ದಾರೆ. ಇನ್ನೂ ಯಾವುದೇ ಅಧಿಕೃತ ಆದೇಶ ಹೊರಡಿಸಲಾಗಿಲ್ಲ ಎಂದು ಪಾಲಕ್ಕಾಡ್ ರೈಲ್ವೆ ವಿಭಾಗ ದೃಢಪಡಿಸಿದ್ದರೂ, ವಿವರವಾದ ಯೋಜನಾ ವರದಿಯನ್ನು ರೂಪಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಕೇರಳದ ಈಗಾಗಲೇ ಸಂಚರಿಸುತ್ತಿರುವ ವಂದೇ ಭಾರತ್ ರೈಲುಗಳು ಲಾಭದಾಯಕವೆಂದು ಸಾಬೀತಾಗಿದ್ದು, ಹೊಸ ಮಾರ್ಗಗಳ ಕಾರ್ಯಸಾಧ್ಯತೆಯ ಬಗ್ಗೆ ವಿಶ್ವಾಸವನ್ನು ಹೆಚ್ಚಿಸಿವೆ. ಈ ರೈಲುಗಳನ್ನು ದೀರ್ಘ ರಾತ್ರಿ ಪ್ರಯಾಣಕ್ಕೆ ವಿಸ್ತರಿಸುವುದರಿಂದ ರಾಜ್ಯದ ಹೆಚ್ಚುತ್ತಿರುವ ದೂರದ ಪ್ರಯಾಣಿಕರ ಸಂಖ್ಯೆಗೆ, ವಿಶೇಷವಾಗಿ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಪ್ರವಾಸಿಗರಿಗೆ ಮತ್ತಷ್ಟು ಪ್ರಯೋಜನವಾಗಬಹುದು.
ಇನ್ನು ದೇಶದಾದ್ಯಂತ, ಭಾರತೀಯ ರೈಲ್ವೆಯು ಸ್ಲೀಪರ್ ವಂದೇ ಭಾರತ್ ಸೇವೆಗಳನ್ನು ಪ್ರಾರಂಭಿಸಲು ಆದ್ಯತೆ ನೀಡುತ್ತಿದೆ. ದೆಹಲಿ-ಪಾಟ್ನಾ ಮಾರ್ಗವು ಈ ವರ್ಷದ ದೀಪಾವಳಿಯ ವೇಳೆಗೆ ಅಂತಹ ರೈಲನ್ನು ಆಯೋಜಿಸುವ ಮೊದಲ ಮಾರ್ಗವಾಗುವ ನಿರೀಕ್ಷೆಯಿದೆ. ಇನ್ನೂ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.
ಈ ರೈಲುಗಳಿಗೆ ಪ್ರಾಯೋಗಿಕ ಸಂಚಾರ ಕಳೆದ ವರ್ಷ ಸೆಪ್ಟೆಂಬರ್’ನಲ್ಲಿ ಪ್ರಾರಂಭವಾಗಿತ್ತು. ಇದೇ ವೇಳೆ ಚೆನ್ನೈ ಮತ್ತು ರಾಯ್ ಬರೇಲಿಯ ಕಾರ್ಖಾನೆಗಳಲ್ಲಿ ಕೋಚ್ ಉತ್ಪಾದನೆ ನಡೆಯುತ್ತಿದೆ.
ರೈಲ್ವೆ ಸಚಿವ ವೈಷ್ಣವ್ ಇತ್ತೀಚೆಗೆ ಪೂರ್ಣಗೊಂಡ ಸ್ಲೀಪರ್ ಕೋಚ್’ಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಂದೇ ಭಾರತ್ ಸ್ಲೀಪರ್ ಕೋಚ್’ಗಳು ಅತ್ಯಾಧುನಿವಾಗಿದ್ದು ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅಸ್ತಿತ್ವದಲ್ಲಿರುವ ಚೇರ್-ಕಾರ್ ಮಾದರಿಗಳಿಗಿಂತ ಭಿನ್ನವಾಗಿ, ಈ ರೈಲುಗಳು ಸ್ಲೀಪರ್ ಕೋಚ್’ಗಳನ್ನು ಮಾತ್ರ ಹೊಂದಿರುತ್ತವೆ.
ವಂದೇ ಭಾರತ್ ಸ್ಲೀಪರ್ ಒಟ್ಟು 16 ಕೋಚ್ ಎಸಿ ಪ್ರಥಮ ದರ್ಜೆ ಕೋಚ್ ಸೇರಿವೆ. ಇದು ಒಂದು ಗಂಟೆಗೆ ಗರಿಷ್ಠ 160 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದೆ. ಅಲ್ಲದೇ, ಈ ರೈಲಿನಲ್ಲಿ ಆಧುನಿಕ ಜೈವಿಕ-ಶೌಚಾಲಯಗಳು ಇರಲಿವೆ. ಅತ್ಯಂತ ಸುಧಾರಿಕ ಕೋಚ್’ಗಳಿದ್ದು, ತಾಪನ, ವಾತಾಯನ, ಹವಾನಿಯಂತ್ರಣ ವ್ಯವಸ್ಥೆ ಹೊಂದಿವೆ. ಅಲ್ಲದೇ, ಆನ್’ಬೋರ್ಡ್ ಭದ್ರತೆಗಾಗಿ ಕಣ್ಗಾವಲು ಕ್ಯಾಮೆರಾಗಳು, ವರ್ಧಿತ ಸುರಕ್ಷತೆಗಾಗಿ ಅಪಘಾತ-ನಿರೋಧಕ ವಿನ್ಯಾಸ ಮತ್ತು ಸುಧಾರಿತ ಪ್ರಯಾಣಿಕರ ಅನುಭವಕ್ಕಾಗಿ ಸೊಗಸಾದ ಬೆಳಕು ಮತ್ತು ಒಳಾಂಗಣಗಳನ್ನು ಸಹ ಹೊಂದಿರುತ್ತದೆ.
ಭಾರತೀಯ ರೈಲ್ವೆ ವರ್ಷಾಂತ್ಯದ ವೇಳೆಗೆ ಕನಿಷ್ಠ 10 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪ್ರಾರಂಭಿಸುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದ್ದು, ದೆಹಲಿ-ಪಾಟ್ನಾ ಮತ್ತು ದೆಹಲಿ-ಕೋಲ್ಕತ್ತಾದಂತಹ ಮಾರ್ಗಗಳು ಬಿಹಾರ ಮೂಲಕ ಸಕ್ರಿಯ ಪರಿಗಣನೆಯಲ್ಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















