ಕಲ್ಪ ಮೀಡಿಯಾ ಹೌಸ್ | ಸಾಗರ |
ದೇವಿಯಲ್ಲಿ ಸಹಜಾನಂದದ ಪ್ರತೀಕವಾದ ಕರುಣೆಯ ಮಂದಹಾಸವೂ ಇದೆ. ವಿವಿಧ ರೀತಿಯ ಆಯುಧಗಳನ್ನು ದೇವಿ ಧರಿಸಿದ್ದಾಳೆ. ನಾವು ಭಂಡಾಸುರರಾದರೆ ದೇವಿ ಆಯುಧ ಪ್ರಯೋಗ ಮಾಡುತ್ತಾಳೆ. ನಾವು ಪುಣ್ಯದ ದಾರಿಯಲ್ಲಿ ಸಾಗಿದರೆ ದೇವಿಯ ಕರುಣೆಗೆ ಪಾತ್ರರಾಗುತ್ತೇವೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಸಾಗರದ ಶ್ರೀ ರಾಘವೇಶ್ವರ ಭವನದಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ದ ಏಳನೇ ದಿನ ಲಲಿತೋಪಾಖ್ಯಾನ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿದರು. ನಮ್ಮ ನಡೆ ನುಡಿಗಳು ನಾವು ದೇವಿಯ ಕರುಣಾಪೂರಿತ ಅನುಗ್ರಹಕ್ಕೆ ನಾವು ಪಾತ್ರರೋ ಅಥವಾ ದೇವಿಯ ಆಯುಧಾಘಾತಕ್ಕೆ ನಾವು ಅರ್ಹರೋ ಎಂದು ನಿರ್ಧರಿಸುತ್ತದೆ ಎಂದು ಮಾರ್ಮಿಕವಾಗಿ ಹೇಳಿದ ಶ್ರೀಗಳು, ಇಂದಿನ ವಿಜ್ಞಾನವನ್ನು ಓದಿದವರು ನಮ್ಮ ಪುರಾಣ ಕಥೆಗಳನ್ನು ಕಾಗಕ್ಕಾ ಗುಬ್ಬಕ್ಕನ ಕಥೆ ಎಂದು ಭಾವಿಸಬಹುದು. ಆದರೆ ನಮ್ಮ ಋಷಿ ಮುನಿಗಳು ಜ್ಞಾನ ದೃಷ್ಟಿಯಲ್ಲಿ ಅವುಗಳನ್ನು ಕಂಡುಕೊಂಡಿದ್ದಾರೆ. ನಾವು ಆ ಜ್ಞಾನ ದೃಷ್ಟಿಯಲ್ಲಿ ನಮ್ಮ ಪುರಾಣಾದಿಗಳನ್ನು ಗಮನಿಸಿದಾಗ ಅವುಗಳ ಒಳಮರ್ಮದ ಅರಿವಾಗುತ್ತದೆ ಎಂದರು.

ಲಲಿತಾ ದೇವಿ ಹಾಗೂ ಭಂಡಾಸುರನ ಯುದ್ಧದ ಸನ್ನಿವೇಶಗಳ ಬಗ್ಗೆ ವಿವರಿಸಿದ ಶ್ರೀಗಳು, ಅಂದಿನ ಯುದ್ಧ ತಂತ್ರಗಳು ಹಾಗೂ ಯುದ್ಧೋಪಕರಣಗಳು ವೈರಿಗೂ ಕೂಡ ಮುಕ್ತಿಗೆ ದಾರಿ ತೋರಿಸುವಂತಿದ್ದವು. ಆದರೆ ಇಂದಿನ ಯುದ್ಧಾಯುಧಗಳು ಸಮೂಹ ನಾಶಕವಾಗಿದ್ದು, ಜೀವ ಸಂಕುಲಕ್ಕೆ ಮಾರಕವಾಗಿವೆ ಎಂದು ವಿವರಿಸಿದರು.

ಇದಕ್ಕೂ ಮುನ್ನ ನವರಾತ್ರ ನಮಸ್ಯಾ ಸಮಿತಿಯಿಂದ ಕೊಡ ಮಾಡಿದ ಸಮಾಜ ಗೌರವವನ್ನು ಜೈನ ಸಮಾಜ, ವಿಷ್ಣು ಸಮಾಜ, ಜೈನ ದಿಗಂಬರ ಸಮಾಜ, ಆರ್ಯ ವೈಶ್ಯ ಸಮಾಜ, ಕುರುಬ ಸಮಾಜ ಹಾಗೂ ಮಾರಿಕಾಂಬಾ ಸಮಿತಿಯವರಿಗೆ ಕೊಡಲಾಯಿತು. ಆಯಾ ಸಮಾಜದ ಪರವಾಗಿ ಅಧ್ಯಕ್ಷರಾದ ಚಗನ್ ಜಿ. ಲಾಲ್, ಭಿಮ್ ಸಿಂಗ್, ಹೊಯ್ಸಳ, ಸೂರ್ಯನಾರಾಯಣ, ಹನುಮಂತಪ್ಪ ಹಾಗೂ ನಾಗೇಂದ್ರ ಗೌರವ ಸ್ವೀಕರಿಸಿದರು.

ಇದಕ್ಕೂ ಮುನ್ನ ಬೆಳಗ್ಗೆ ಚಂಡಮುಂಡಹಾ ಉಪಾಸನೆ, ಶ್ರೀಸೂಕ್ತ ಹವನ, ಚಂಡಿಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ, ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ಹಾಗೂ ಚಂಡಿಕಾ ಪಾರಾಯಣ ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















Discussion about this post