ಕಲ್ಪ ಮೀಡಿಯಾ ಹೌಸ್ | ಭೋಪಾಲ್ |
ದೇಶದಲ್ಲಿ ಕೆಮ್ಮಿನ ಸಿರಪ್ #Cough Syrup ಸೇವಿಸಿ ಮತ್ತೆ 6 ಮಕ್ಕಳು ಸಾವಿಗೀಡಾಗಿದ್ದು, ಈವರೆಗೂ ಈ ಕಾರಣಕ್ಕೆ ಸಾವಿಗೀಡಾದ ಮಕ್ಕಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಮಧ್ಯಪ್ರದೇಶದಲ್ಲಿ ಮಾರಕ ಕೆಮ್ಮಿನ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಆರು ಮಕ್ಕಳು ಸಾವಿಗೀಡಾಗಿದ್ದಾರೆ.
ಈ ಮೊದಲು ಮಧ್ಯಪ್ರದೇಶದ ಛಿಂದ್ವಾಡದ 14 ಮಕ್ಕಳು ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ದೃಢಪಡಿಸಿತ್ತು.
ನಂತರ ಮತ್ತೆ ಮಂಗಳವಾರ ಛಿಂದ್ವಾಡದಲ್ಲಿ 4 ಹಾಗೂ ಬೇತುಲ್’ನಲ್ಲಿ 2 ಮಕ್ಕಳು ಸಾವನ್ನಪಿದ್ದಾರೆ. ಇನ್ನೂ 6 ಮಕ್ಕಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಕ್ಕಳ ಸ್ಥಿತಿ ಗಂಭೀರವಾಗಿದೆ.
ಸಿರಪ್ ಸೇವಿಸಿ ಅಸ್ವಸ್ಥರಾದ ಮಕ್ಕಳ ಚಿಕಿತ್ಸೆಯ ಖರ್ಚನ್ನು ತಾನೇ ಭರಿಸುವುದಾಗಿ ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ. ಈಗಾಗಲೇ ಔಷಧಿ ಉತ್ಪಾದಕ ಕಂಪನಿಗೆ ತಮಿಳುನಾಡು ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಇದೇ ವೇಳೆ, ಪಂಜಾಬ್ ಸರ್ಕಾರ ಕೂಡ ಸಿರಪನ್ನು ನಿಷೇಧಿಸಿದೆ. ಇದರೊಂದಿಗೆ ಪಂಜಾಬ್ ಸಿರಪ್ ನಿಷೇಧಿಸಿದ 6ನೇ ರಾಜ್ಯವಾಗಿ ಹೊರಹೊಮ್ಮಿದೆ. ಸಿರಪ್ ಕುರಿತು ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟಿಗೂ ಅರ್ಜಿ ಸಲ್ಲಿಸಲಾಗಿದೆ.
ಇನ್ನು, ಕೆಮ್ಮಿನ ಸಿರಪ್ ಸೇವಿಸಿ ವಿವಿಧ ರಾಜ್ಯಗಳಲ್ಲಿ ಮಕ್ಕಳು ಸಾಲು ಸಾಲಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮುನ್ಸೂಚನೆಯಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಹೀಗಿದೆ ಮಾರ್ಗಸೂಚಿ:
ಚಿಕ್ಕ ಮಕ್ಕಳ ಜಾಗ್ರತೆ ವಿಚಾರದಲ್ಲಿ:
ಮಕ್ಕಳಿಗೆ ಕೆಮ್ಮಿನ ಸಿರಪ್’ಗಳನ್ನು ನೀಡಬೇಡಿ. 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್’ಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು. 2 ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ಸರಿಯಾದ ತಜ್ಞ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದ ನಂತರವಷ್ಟೆ ಅವರ ನಿಗದಿತ ಸಲಹೆ ಮೇರೆಗೆ ಮಾತ್ರ ಈ ಔಷಧಿಗಳನ್ನು ನೀಡುಬೇಕು.
ಹಿರಿಯ ಮಕ್ಕಳ ವಿಚಾರದಲ್ಲಿ:
ಸ್ವಲ್ಪ ಹಿರಿಯ ವಯಸ್ಸಿನ ಮಕ್ಕಳಿಗೆ ಕೆಮ್ಮಿನ ಸಿರಪ್’ಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ನೀಡಬೇಕು. ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಅನ್ನು ಬಳಸಿ. ಬಹು ಔಷಧಿಗಳ ಸಂಯೋಜನ ಇರುವ ಸಿರಪ್’ಗಳನ್ನು ಉಪಯೋಗಿಸಬಾರದು.
ಸುರಕ್ಷಿತ ಮನೆಮದ್ದುಗಳು ಉತ್ತಮ
ಚಿಕ್ಕಮಕ್ಕಳಲ್ಲಿ ಕೆಮ್ಮ ಹಾಗೂ ಶೀತದ ಪ್ರಭಾವ ಸೌಮ್ಯವಾಗಿರುತ್ತದೆ. ಇದು ಮನೆಮದ್ದುಗಳಿಂದಲೇ ಗುಣವಾಗುವ ಸಾಧ್ಯತೆಯಿರುತ್ತದೆ. ಸುರಕ್ಷಿತವಾದ ಕ್ರಮಗಳಿಂದ ನಿಧಾನವಾಗಿ ಉತ್ತಮಗೊಳ್ಳುತ್ತದೆ
ಪೋಷಕರು ಮಕ್ಕಳಿಗೆ:
ಸಾಕಷ್ಟು ದ್ರವಪದಾರ್ಥಗಳನ್ನು ನೀಡುವುದು, ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಮಾಡಲು ಅವಕಾಶ ನೀಡುವುದು. ಪೌಷ್ಟಿಕ ಆಹಾರವನ್ನು ನೀಡುವುದು.
ಸ್ವಯಂ ಔಷದೋಪಚಾರ ಮಾಡಬೇಡಿ
ವೈದ್ಯರ ಸಲಹೆ ಇಲ್ಲದೆ ಕೆಮ್ಮಿನ ಸಿರಪ್’ಗಳನ್ನು ಎಂದಿಗೂ ಖರೀದಿಸಬೇಡಿ ಅಥವಾ ಬಳಸಬೇಡಿ. ಈ ಹಿಂದೆ ಬಳಸಿ ಉಳಿದ ಔಷಧಗಳನ್ನು ಅಥವಾ ಇತರರು ಶಿಫಾರಸು ಮಾಡಿದ ಔಷಧಗಳನ್ನು ಬಳಸುವುದನ್ನು ನಿಲ್ಲಿಸಿ. ಮಕ್ಕಳಲ್ಲಿ ಯಾವುದೇ ಅಸಹಜ ಪ್ರತಿಕ್ರಿಯೆ, ನಿದ್ರಾವಸ್ಥೆ, ವಾಂತಿ ಅಥವಾ ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ಹತ್ತಿರದ ತಜ್ಞ ವೈದ್ಯರಿಗೆ ತೋರಿಸಿ. ಔಷಧದ ಅವಧಿ ಮುಗಿಯುವ ದಿನಾಂಕ ಪರಿಶೀಲಿಸಿ ಮತ್ತು ಲೇಬಲ್’ಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post