ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾರತೀಯ ಸನಾತನ ಗುರು ಪರಂಪರೆ, ವೇದ -ಶಾಸ್ತ್ರ ಮತ್ತು ಮಹಾ ಕಾವ್ಯಗಳು ನೀಡಿದ ಸಂದೇಶವನ್ನು ಪಾಲಿಸಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದು ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ, ಮಹಾ ಮಹೋಪಾಧ್ಯಾಯ ಡಾ. ಮಾಹುಲಿ ವಿದ್ಯಾಸಿಂಹಾಚಾರ್ಯ ಹೇಳಿದರು.
ನಗರದ ಶ್ರೀರಾಮಪುರದ ಶ್ರೀ ವೆಂಕಟೇಶ ಧ್ಯಾನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಜ್ಞಾನಸತ್ರ ‘ಗೀತಾಭಾಷ್ಯ ಒಂದು ವಿಶೇಷ ಚಿಂತನ’ ಸಪ್ತಾಹ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಆಧುನಿಕತೆ ಹೆಚ್ಚಾದಂತೆಲ್ಲ ಮಾನವೀಯತೆ ಕಡಿಮೆಯಾಗುತ್ತಿದೆ. ಪ್ರೀತಿ, ವಿಶ್ವಾಸ, ಅಭಿಮಾನ, ಪರೋಪಕಾರ, ದೀನರ ಸೇವೆ ಗುರುಗಳ ಮೇಲಿನ ಭಕ್ತಿ, ತಂದೆ- ತಾಯಿ ಮೇಲಿನ ವಾತ್ಸಲ್ಯ ಕ್ಷೀಣವಾಗುತ್ತಿದೆ. ನಾವು ಧರ್ಮ ಮತ್ತು ಅಧ್ಯಾತ್ಮದ ಅರಿವುಗಳಿಂದ ದೂರ ಇರುವುದೇ ಇದಕ್ಕೆ ಕಾರಣ ಎಂದು ಡಾ.ವಿದ್ಯಾಸಿಂಹಾಚಾರ್ಯ ಹೇಳಿದರು.
ಮಾನವ ಇಂದು ಬೇರೆ ಬೇರೆ ಗ್ರಹಗಳಿಗೆ ಹೋಗುತ್ತಿದ್ದಾನೆ. ಆಕಾಶದಲ್ಲೇ ಮನೆ ನಿರ್ಮಿಸುವ ತಂತ್ರಜ್ಞಾನ ಕೆಲವೇ ದಿನದಲ್ಲಿ ಬರಲಿದೆ. ಆದರೆ ಇದೇ ಸಂದರ್ಭ ಭಯೋತ್ಪಾದನೆ, ಹಿಂಸೆ, ಅತ್ಯಾಚಾರ, ಅಕ್ರಮ ಸಂಬಂಧದ ಸಂಖ್ಯೆ ಮಿತಿ ಮೀರುತ್ತಿದೆ. ದೊಡ್ಡ ಕುಟುಂಬದಲ್ಲಿ ದೊಡ್ಡ ಬಿರುಕು ಬಂದಿದೆ ಎಂದರು.
ಪತಿ-ಪತ್ನಿಯ ಸಂಬಂಧವೇ ಪಾವಿತ್ರತೆ ಕಳೆದುಕೊಳ್ಳುತ್ತಿದೆ. ಇಂತಹ ಅನರ್ಥಗಳನ್ನು ತಡೆಯಲು ನಮಗೆ ಒಂದು ಬಲವಾದ ನೀತಿ ಬೇಕು. ಅದು ದೊರಕುವುದು ಕೇವಲ ಸನಾತನ ಧರ್ಮದ ಸಂದೇಶದಿಂದ ಮಾತ್ರ. ಅದಕ್ಕಾಗಿ ಜ್ಞಾನ ಸತ್ರಗಳು ಹೆಚ್ಚಾಗಬೇಕು ಎಂದು ಡಾ. ವಿದ್ಯಾಸಿಂಹಾಚಾರ್ಯ ಪ್ರತಿಪಾದಿಸಿದರು.
ಧರ್ಮ ಮತ್ತು ಅಧ್ಯಾತ್ಮ ನಮ್ಮ ಬದುಕನ್ನು ರೂಪಿಸಬಲ್ಲ ಬಹುದೊಡ್ಡ ಶಕ್ತಿಗಳು. ವಿಜ್ಞಾನ ಬೆಳೆದಂತೆ ಅಧ್ಯಾತ್ಮ ಜ್ಞಾನವೂ ವಿಸ್ತಾರಗೊಳ್ಳಬೇಕು. ಈ ದಿಸೆಯಲ್ಲಿ ನಮ್ಮ ವೇದ ಮತ್ತು ಶಾಸ್ತ್ರಗಳು ಜೀವನ ವಿಕಾಸಕ್ಕೆ ಪೂರಕವಾಗಬೇಕು ಎಂದರು.
ಪಂಡಿತರಾದ ಬಾದರಾಯಣಾಚಾರ್ಯ, ವ್ಯಾಸತೀರ್ಥಾಚಾರ್ಯ, ಹೇಮಂತ ಆಚಾರ್ಯ ಗುಡಿ, ಆದ್ಯ ಗೋವಿಂದಾಚಾರ್ಯ, ಭಾವಬೋಧ ಆಚಾರ್ಯ ಇತರರು ಇದ್ದರು.
ಪ್ರವಚನ
ಸಂಜೆ ಅಗ್ರಹಾರದ ಉತ್ತರಾದಿ ಮಠದ ಶ್ರೀ ಧನ್ವಂತರಿ ಸನ್ನಿಧಾನದಲ್ಲಿ ‘ಶ್ರೀಮದ್ ಭಾಗವತ’- ಒಂದು ವಿಶಿಷ್ಟ ದೃಷ್ಟಿ- ಕುರಿತು ವಿದ್ಯಾಸಿಂಹಾಚಾರ್ಯರು ವಿಶೇಷ ಪ್ರವಚನ ನೀಡಿದರು. ಪಂಡಿತ ಅನಿರುದ್ಧಾಚಾರ್ಯ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post