ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಡಿ ಮಾಜಿ ಸ್ಪೀಕರ್ ಹಾಗೂ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರನ್ನು #ChiefMinister ವಿಧಾನಸೌಧದಲ್ಲಿ ಭೇಟಿಮಾಡಿತ್ತು.
ಸರ್ಕಾರ ಪಶ್ಚಿಮಘಟ್ಟದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಶರಾವತಿ ಪಂಪ್ಸ್ ಸ್ಟೋರೇಜ್, #Sharavathi Pump Storage ಬೇಡ್ತಿ-ವರದಾ ನದಿ ತಿರುವು ಮತ್ತು ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಗಳು ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಮಾರಕವಾಗಿದ್ದು, ಯಾವುದೇ ಕಾರಣಕ್ಕೂ ಕೂಡಲೇ ಈ ಯೋಜನೆಗಳನ್ನು ಕೈಬಿಡುವಂತೆ ಉತ್ತರ ಕನ್ನಡ ಜಿಲ್ಲೆಯ ನಿಯೋಗವು ಅವರನ್ನು ಒತ್ತಾಯಿಸಿತು. ಉದ್ದೇಶಿತ ಮೂರೂ ಯೋಜನೆಗಳು ಪಶ್ಚಿಮಘಟ್ಟದಲ್ಲಿ ಮತ್ತಷ್ಟು ಅಪಾಯಕ್ಕೆ ತಂದೊಡ್ಡಲಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಸರ್ಕಾರ ಮೂರೂ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ఆಗ್ರಹಿಸಿತು.
ಈ ಯೋಜನೆಗಳು ಅತ್ಯಂತ ಪಶ್ಚಿಮಘಟ್ಟದಲ್ಲಿ ಜಾರಿಗೆ ಪ್ರಸ್ತಾಪ ಆಗಿವೆ. ನಾಡಿನ ಪ್ರಮುಖ ನದಿಗಳಿಗೆ ನೀರುಣಿಸುವ ಜಲಮೂಲವಾದ ಈ ಸೂಕ್ಷ್ಮ ಪರಿಸರವನ್ನು ನಾಶ ಮಾಡಿದರೆ, ನಾಡಿನ ಜನರ ಜೀವನ ಭದ್ರತೆಗೆ ಧಕ್ಕೆ ಉಂಟಾಗಲಿದೆ. ಇದನ್ನು ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸೇರಿದಂತೆ ಹಲವು ವೈಜ್ಞಾನಿಕ ಅಧ್ಯಯನಗಳು ಕೂಡ ಸ್ಪಷ್ಟವಾಗಿ ಹೇಳಿವೆ. ಹಾಗಾಗಿ, ಈ ರೀತಿಯ ಬೃಹತ್ ಯೋಜನೆಗಳನ್ನು ಈಗ ಮಾತ್ರವಲ್ಲ; ಮುಂದೆಯೂ ಜಾರಿ ಮಾಡಿದರೆ ಭಾರಿ ಅಪಾಯವನ್ನು ಆಹ್ವಾನಿಸಿದಂತಾಗಲಿದೆ ಎಂದು ನಿಯೋಗ ಕಳವಳ ವ್ಯಕ್ತಪಡಿಸಿತು. ಬೇಡ್ತಿ-ವರದಿ ನದಿ ತಿರುವು ಯೋಜನೆಯನ್ನು 15,511 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಜಂಟಿಯಾಗಿ ಕೈಗೆತ್ತಿಕೊಳ್ಳಲು ಉದ್ದೇಶಿಸಿವೆ. ಇದರಡಿ 18.5 ಟಿಎಂಸಿ ನೀರನ್ನು ಬೇಡ್ತಿ ಕಣಿವೆಯಿಂದ ಎತ್ತಿ ವರದಾನದಿಗೆ ಕೊಂಡೊಯ್ಯಲು ಉದ್ದೇಶಿಸಲಾಗಿದೆ. ಇದರನ್ವಯ ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ನದಿಯ ಸುರೇಮನೆ ಎಂಬಲ್ಲಿ ಮೂರು ಅಣೆಕಟ್ಟೆಗಳನ್ನು ನಿರ್ಮಿಸಿ, ಕಾಲುವೆ, ಸುರಂಗ ಹಾಗೂ ಕೊಳವೆ ಮಾರ್ಗಗಳ ಮೂಲಕ ನೀರನ್ನು ಒಯ್ಯಲಾಗುತ್ತದೆ. ಇದು ಶಿರಸಿ, ಮುಂಡಗೋಡ, ಯಲ್ಲಾಪುರ, ಅಂಕೋಲಾ ತಾಲೂಕಿನ ಸಾವಿರಾರು ಹೆಕ್ಟೇರ್ ಕೃಷಿ ಮತ್ತು ಅರಣ್ಯ ಪ್ರದೇಶಕ್ಕೆ ಭಾರಿ ಕುತ್ತು ತರಲಿದೆ ಎಂದು ನಿಯೋಗ ಆತಂಕ ವ್ಯಕ್ತಪಡಿಸಿದೆ. ಅದೇ ರೀತಿ, ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಯು 23 ಸಾವಿರ ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಇದರಡಿ 35 ಟಿಎಂಸಿ ನೀರನ್ನು ಅಘನಾಶಿನಿ ಕಣಿವೆಯಿಂದ ವೇದಾವತಿ ನದಿಗೆ ಸೇರ್ಪಡೆ ಮಾಡಲಾಗುತ್ತದೆ. ಇದರ ಪ್ರಕಾರ ಸಿದ್ದಾಪುರ ತಾಲೂಕಿನ ಗೋಳಿಮಕ್ಕಿಯಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸಿ, ಹಾರ್ಸಿಕಟ್ಟಾ-ಸಿದ್ದಾಪುರ-ಸಾಗರ-ಶಿವಮೊಗ್ಗ ಮೂಲಕ ವೇದಾವತಿ ನದಿಗೆ ಕಾಲುವ ಮತ್ತು ಕೊಳವೆ ಮಾರ್ಗಗಳ ಮೂಲಕ ನೀರು ಒಯ್ಯಲಾಗುವುದು. ಇದು ಕೂಡ ಸಿದ್ದಾಪುರ, ಹೊನ್ನಾವರ, ಕುಮಟಾ, ಸಾಗರ ತಾಲೂಕಿನ ಕೃಷಿ ಮತ್ತು ಅರಣ್ಯ ಪ್ರದೇಶಕ್ಕೆ ಆಪಾಯಕಾರಿ ಆಗಲಿದೆ. ಇನ್ನು ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆ ಅಡಿ ಎರಡು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಸುರಂಗ ಜಲವಿದ್ಯುತ್ ಪರ್ವತ ಶ್ರೇಣಿ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಇದನ್ನು ದಟ್ಟ ಮಳೆಕಾಡು ಇರುವ ಸೂಕ್ತ ಪ್ರದೇಶದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಇದರಿಂದ ಕಾಡಿನ ವನ್ಯಜೀವಿ ಆವಾಸಸ್ಥಾನ ನಾಶವಾಗಿ, ಅಪರೂಪದ ಕಾಡುಪ್ರಾಣಿಗಳು, ಸುತ್ತಲಿನ ಜನವಸತಿಗೆ ನುಗ್ಗಿ ಹೆಚ್ಚಿಸಲು ಮಾನವ-ವನ್ಯಜೀವಿ ಕಾರಣವಾಗಲಿದೆ. ಅಷ್ಟೇ ಅಲ್ಲ ಸಮುದ್ರದ ಉಪ್ಪುನೀರು ಶರಾವತಿ ನದಿಯಲ್ಲಿ ಹಿಮ್ಮುಖವಾಗಿ ತುಂಬಿಕೊಳ್ಳಲಿದೆ. ಪರಿಣಾಮ ರೈತರು ಉಪ್ಪುನೀರು ಕುಡಿಯುವ ಪರಿಸ್ಥಿತಿ ಎದುರಿಸಲಿದ್ದಾರೆ ಎಂದು ಬೇಡ್ತಿ ಆಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಆತಂಕ ವ್ಯಕ್ತಪಡಿಸಿದರು.
ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಸ್ವರ್ಣವಲ್ಲಿ ಮಠದ ಅಧ್ಯಕ್ಷ ವಿ.ಎನ್.ಹೆಗಡೆ, ಪರಿಸರ ಕಾರ್ಯಕರ್ತ ಬಾಲಚಂದ್ರ ಸಾಯಿಮನೆ, ವೆಂಕಟೇಶ ನಾಯ್ಕ, ಗಣಪತಿ ಕೆ. ಮತ್ತಿತರರು ನಿಯೋಗದಲ್ಲಿದ್ದರು.
Discussion about this post