ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಆನರ್ಸ್ ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಬೀಜೋಪಚಾರದ ಮಹತ್ವ ಹಾಗೂ ಇದನ್ನು ಮಾಡುವ ವಿಧಾನದ ಕುರಿತು ಗುಂಪು ಚರ್ಚೆ ಮತ್ತು ಪ್ರಾತ್ಯಕ್ಷಿತೆಯನ್ನು ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮನುಷ್ಯನಿಗೆ ರೋಗ ಬರುವಂತೆ ಪ್ರತಿಯೊಂದು ಬೆಳೆಗಳಿಗೂ ಕೂಡ ಬಿತ್ತನೆ ಬೀಜದಿಂದ ಕೊಯ್ಲು ಮುಗಿಯುವವರೆಗೂ ಒಂದಿಲ್ಲ ಒಂದು ಕೀಟ ಮತ್ತು ರೋಗದ ಹಾವಳಿ ತಪ್ಪಿದ್ದಲ್ಲ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಿತ್ತುವ ಬೀಜಕ್ಕೆ ಕೃಷಿಯಲ್ಲಿ ಬಹಳ ಮಹತ್ವವನ್ನು ಹೊಂದಿದೆ. ಉತ್ತಮ ಗುಣಮಟ್ಟದ ಬೀಜದಿಂದ ಅಧಿಕ ಇಳುವರಿ ಸಾಧ್ಯ. ಅದಕ್ಕೆ ಬೀಜದ ಗುಣಮಟ್ಟ ಕಾಪಾಡಿಕೊಳ್ಳುವುದು ಒಂದು ಮುಖ್ಯವಾದ ಕೆಲಸವಾಗಿದೆ. ಬೀಜದ ಗುಣಮಟ್ಟ ಕಾಪಾಡಿಕೊಳ್ಳಲು ಹಲವು ವಿಧಾನಗಳಿವೆ. ಅದರಲ್ಲಿ ಬೀಜೋಪಚಾರವು ಒಂದು ಉತ್ತಮವಾದ ವಿಧಾನ. ಹೀಗೆ ಬೀಜೋಪಚಾರ ಮಾಡುವುದರಿಂದ ಬೀಜದ ಗುಣಮಟ್ಟ ಹೆಚ್ಚಿಸಿ ಅದನ್ನು ರೋಗ ಮತ್ತು ಕೀಟಗಳದಿಂದ ಕಾಪಾಡಿಕೊಳ್ಳಬಹುದು ಎಂದು ಕೃಷಿ ವಿದ್ಯಾರ್ಥಿಗಳು ಹೇಳಿದರು.

ತದನಂತರ ಭತ್ತ , ಶುಂಠಿ , ಬಾಳೆ ಬೆಳೆಗಳಲ್ಲಿ ಯಾವ ರೀತಿ ಸಾವಯುವ ಹಾಗೂ ರಾಸಾಯನಿಕ ವಿಧಾನಗಳಿಂದ ಬೀಜೋಪಚಾರ ಮಾಡುತ್ತಾರೆಂದು ಸಂಕ್ಷಿಪ್ತವಾಗಿ ವಿವರಿಸಿ , ಪ್ರಾತ್ಯಕ್ಷಿಕವಾಗಿ ಮಾಡಿ ತೋರಿಸಿದರು. ತದನಂತರ ರೈತರು ತಮ್ಮ ಕೈಯಾರ ಮಾಡಿ ಸ್ವಂತ ಅನುಭವ ಪಡೆದುಕೊಂಡರು.
ಕಾರ್ಯಕ್ರಮದ ಅಂತ್ಯದಲ್ಲಿ ರೈತರು ಬೀಜೋಪಚಾರ ಕುರಿತು ತಮ್ಮ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಹೀಗೆ ರೈತರು ತಮ್ಮ ಮನೆಯಲ್ಲಿ ಕಡಿಮೆ ಖರ್ಚಿನಲ್ಲಿ ತಾವು ತಂದು ಬೀಜಗಳನ್ನು ಸಾವಯವ ಅಥವಾ ರಾಸಾಯನಿಕ ವಿಧಾನಗಳಿಂದ ಬಿಜೋಪಚಾರ ಮಾಡುವುದರಿಂದ ಅದರ ಗುಣಮಟ್ಟ ಹೆಚ್ಚಿಸಿ, ರೋಗ ಅಥವಾ ಕೀಟಗಳಿಂದ ರಕ್ಷಿಸಿ ,ತಮ್ಮ ಬೆಳೆಯ ಇಳುವರಿ ಹೆಚ್ಚಿಸಬಹುದೆಂದು ವಿದ್ಯಾರ್ಥಿಗಳು ರೈತರಿಗೆ ಮನವರಿಕೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 













Discussion about this post