ಕಲ್ಪ ಮೀಡಿಯಾ ಹೌಸ್ | ಉಡುಪಿ |
ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಿದ್ದು, ಶ್ರೀ ಕೃಷ್ಣ ಮಠದ ಮಹಾದ್ವಾರದಲ್ಲಿ ಪ್ರಧಾನಿ ಮೋದಿ ಅವರಿಗೆ ಪೂರ್ಣ ಕುಂಭದೊಂದಿಗೆ ಮಠದ ಪ್ರಮುಖರು, ಜನಪ್ರತಿನಿಧಿಗಳು ಸ್ವಾಗತಿಸಿದರು.
ಅಷ್ಟಮಠಗಳನ್ನು ವೀಕ್ಷಿಸುತ್ತಾ ಸಾಗಿದ ಮೋದಿ ಅವರು ಕನಕ ಗೋಪುರದ ಮುಂದೆ ಇಳಿದು, ಕನಕದಾಸರ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ, ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದರು. ಬಳಿಕ ಮುಖ್ಯಪ್ರಾಣ ದೇವರ ಗರುಡ ದೇವರ ದರ್ಶನ ಪಡೆದರು.
ಮಧ್ವ ಸರೋವರ ವೀಕ್ಷಿಸಿದ ಮೋದಿ ಮಧ್ವ ಸರೋವರಕ್ಕೆ ತೆರಳಿ, ತೀರ್ಥ ಪ್ರೋಕ್ಷಣೆ ಮಾಡಿಕೊಂಡು ಮಠದೊಳಗೆ ತೆರಳಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪುತ್ತಿಗೆ ಸ್ವಾಮೀಜಿಯವರ ಸನ್ಯಾಸ ಜೀವನದ 50ನೇ ವರ್ಷ ಪೂರ್ಣ ಹಿನ್ನೆಲೆ ಹಮ್ಮಿಕೊಳ್ಳಲಾಗಿರುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಅವರು, ಎರಡು ಕೋಟಿ ವೆಚ್ಚದಲ್ಲಿ ತೀರ್ಥ ಮಂಟಪಕ್ಕೆ ನಿರ್ಮಿಸಲಾಗಿರುವ ಸ್ವರ್ಣ ಲೇಪನ ಹಾಗೂ ಸ್ವರ್ಣಲೇಪಿತ ಕನಕನ ಕಿಂಡಿಯನ್ನು ಉದ್ಘಾಟಿಸಿದರು.
ದೀಪ ಬೆಳಗುವ ಮೂಲಕ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ಮಠಾಧೀಶರು, ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















