ಕಲ್ಪ ಮೀಡಿಯಾ ಹೌಸ್ | ಆನವಟ್ಟಿ |
ವರದಾ-ದಂಡಾವತಿ ನದಿಗಳ ಸಂಗಮ ಕ್ಷೇತ್ರದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಹೊಳೆಲಿಂಗೇಶ್ವರ ಜಾತ್ರೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಹೊಳೆ ಲಿಂಗೇಶ್ವರ ರಥೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜಡೆ ಮಠದ ಡಾ. ಮಹಾಂತ ಸ್ವಾಮೀಜಿ, ಕುಮಾರ ಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ, ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡರು.
ತಹಶೀಲ್ದಾರ್ ಮಂಜುಳಾ ಹೆಗಡಾಳ್ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥ ಎಳೆದು ತಮ್ಮ ಭಕ್ತಿ ಅರ್ಪಿಸಿದರು.
ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ವಿವಿಧ ಕಲಾಮೇಳ ಪ್ರದರ್ಶನ ಜಾತ್ರೆ ಆಗಮಿಸಿದ ಸಾವಿರಾರು ಜನರು ಕಣ್ತುಂಬಿ ಕೊಂಡರು.
ಬಾಳೆಹಣ್ಣಿನ ಮೇಲೆ ಭಕ್ತರು ಇಷ್ಟ-ಕಷ್ಟಗಳನ್ನು ಬರೆದು, ಹಣ್ಣನ್ನು ರಥದ ಕಳಸಕ್ಕೆ ಎಸೆಯುತ್ತಿದ್ದರು. ಕಳಸಕ್ಕೆ ಅವರು ಎಸೆದ ಹಣ್ಣು ಬಿದ್ದರೆ ಅವರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ.
ಯುವಕ-ಯವತಿಯರು ವರದಾ ನದಿಯಲ್ಲಿ ದೋಣಿ ವಿಹಾರ ಮಾಡಿ ಸಂತಸಪಟ್ಟರು. ಮಕ್ಕಳು ಜೋಕಾಲಿ, ಜಾರೋಬಂಡಿ, ಕಾರು,ರೈಲು, ಕುದುರೆ, ಜಪ್ಪಿಂಗ್ ಮುಂತಾದ ಆಟಿಕೆ ಆಡಿ ಖುಷಿಪಟ್ಟರು. ವೃತ್ತಾಕಾರದ ಜೋಕಾಲಿ, ದೋಣಿ ಮುಂತಾದ ಆಟಿಕೆಗಳನ್ನು ದೊಡ್ಡವರು ಆಡಿ ಜಾತ್ರೆ ಆನಂದವನ್ನು ಸವಿದರು.
ನದಿಯಲ್ಲಿ ಸ್ನಾನ ಮಾಡಿ, ನಂತರ ಹೊಳೆ ಲಿಂಗೇಶ್ವರ ದೇವರಿಗೆ ಭಕ್ತರು ಪೂಜೆ ಮಾಡಿಸುವ ಪದ್ದತಿ ಇದೆ. ನದಿಯಲ್ಲಿ ಭಕ್ತರಿಗೆ ಅಪಾಯವಾಗದಂತೆ ವ್ಯವಸ್ಥೆ ಮಾಡಿರುವ ಜಾತ್ರೆ ಸಮಿತಿಯವರು ಎಚ್ಚರಿಕೆ ಫಲಕಗಳನ್ನು ಹಾಕಿದ್ದಾರೆ. ಪೊಲೀಸ್ ಸಿಬ್ಬಂದಿಗಳು ಭಕ್ತರಿಗೆ ಸೂಕ್ತ ರಕ್ಷಣೆ ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ನೆರದ ಸಾವಿರಾರು ಭಕ್ತರಿಗೆ ಅನ್ನ ಪ್ರಸಾದ ವಿನಯೋಗ ಮಾಡಲಾಯಿತು.
ಕೂಡಲಸಂಗಮ ಮಾದರಿ ಅಭಿವೃದ್ದಿ ಮಾಡಿ
ತಾಲೂಕಿನ ದೊಡ್ಡ ಜಾತ್ರೆ, ಜಾತ್ರಾ ಸಮಯದಲ್ಲಿ ನದಿಯ ಮಧ್ಯದಲ್ಲಿರುವ ಹೊಳೆಲಿಂಗೇಶ್ವರ ದೇವರ ಲಿಂಗ ದರ್ಶನ ಮಾಡಲು ಭಕ್ತರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಕೂಡಲ ಸಂಗಮ ಕ್ಷೇತ್ರದ ರೀತಿ ಬಂಕಸಾಣ ಅಭಿವೃದ್ಧಿ ಆಗಬೇಕು ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ರಾಜಪ್ಪ ಗೌಡ ಎಚ್. ಪಾಟೀಲ್ ಆಗ್ರಹಿಸಿದರು.
ಈ ದೇವಸ್ಥಾನಕ್ಕೆ 25 ಎಕರೆ ಜಾಗವಿದೆ. ಈ ಹಿಂದಿನಿಂದ ನಡೆಸಿಕೊಂಡ ಬಂದ ಜಾತ್ರಾ ಸಮಿತಿಯವರು ಹಾಗೂ ನಾವು ಜನಪ್ರತಿನಿಧಿಗಳ ಹಾಗೂ ದಾನಿಗಳ ಸಹಕಾರ ಪಡೆದು ಊಟದ ಹಾಲ್ ಸೇರಿಂದತೆ ಕೆಲವೊಂದು ಕಟ್ಟಡಗಳನ್ನು ಕಟ್ಟಿಸಿದ್ದೇವೆ ಎಂದರು.
ಸೊರಬ ತಾಲೂಕಿನಲ್ಲಿ ಒಂಬತ್ತು ಮಠಗಳಿವೆ. ಶಿವಮೊಗ್ಗ ಜಿಲ್ಲೆಯಿಂದ ಮುಖ್ಯಮಂತ್ರಿ, ಸಚಿವ, ಶಾಸಕ, ಸಂಸದ ಆಯ್ಕೆಯಾಗಿದ್ದಾರೆ. ಬ್ರಿಟೀಷರ ಕಾಲದಿಂದಲ್ಲೂ ಇರುವ ಈ ಐತಿಹಾಸಿಕ ವರದಾ-ದಂಡಾವತಿ ಸಂಗಮ ಕ್ಷೇತ್ರವನ್ನು ಕೂಡಲಸಂಗಮ ಕ್ಷೇತ್ರದ ಮಾದರಿಯಲ್ಲಿ ಅಭಿವೃಧಿಪಡಿಸದೆ ಇರುವುದು ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ರಥೋತ್ಸವದಲ್ಲಿ ಮುಖಂಡರಾದ ಸದಾನಂದಗೌಡ, ಶಿವಲಿಂಗೇಗೌಡ, ಶ್ರೀಧರ ಹುಲ್ತಿಕೊಪ್ಪ, ಧರ್ಮದರ್ಶಿಗಳಾದ ಬಸವರಾಜ್ ಗೌಡ, ಎಚ್.ವಿ ನಾಗರಾಜ ಗೌಡ, ಕೆ.ಎಚ್. ಗಿರಿ ಗೌಡ, ಟಿ.ಈಶ್ವರ, ರಮೇಶ್, ಲಲಿತಮ್ಮ, ಮಲ್ಲಿಕಾರ್ಜುನ ಗೌಡ(ಅರ್ಚಕ), ಗಂಗಮ್ಮ, ಹಾಲಸ್ವಾಮಿ ಶಾಸ್ತ್ರೀ, ಪಂಚಾಕ್ಷರಿ ಶಾಸ್ತ್ರೀ, ವಿ.ವೀರಭದ್ರಗೌಡ, ಎಸ್.ಶಿವಾನಂದಪ್ಪ, ಎಸ್. ಸ್ವರೂಪ್, ನಾಗರಾಜ್ ಜಿ ಮಂಗಾಪುರ, ಜಗದೀಶ್, ಬಸಪ್ಪ ಅಲೂರು ಇದ್ದರು.
(ವರದಿ: ಮಧುರಾಮ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















