ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ಉದ್ಯೋಗ ಮೇಳದ #JobFair ಪೂರ್ವಭಾವಿ ತರಬೇತಿಯು ಉದ್ಯೋಗಾಕಾಂಕ್ಷಿಗಳಿಗೆ ವ್ಯಕ್ತಿತ್ವ ವಿಕಸನ, ಸಂದರ್ಶನ ಕೌಶಲ್ಯ, ಕಂಪನಿಗಳ ಮಾಹಿತಿ ಮತ್ತು ಮೇಳದಲ್ಲಿ ಹೇಗೆ ಭಾಗವಹಿಸಬೇಕೆಂದು ತಿಳಿಸುತ್ತದೆ ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಕೆ.ಎಸ್. ಗುರುಮೂರ್ತಿ ತಿಳಿಸಿದರು.
ಶಿರಾಳಕೊಪ್ಪ #Shiralakoppa ನಗರದ ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರ ಜನ್ಮದಿನದ ಅಂಗವಾಗಿ ಆಳ್ವಾಸ್ ವಿದ್ಯಾ ಸಂಸ್ಥೆಯ ಸಹಕಾರದೊಂದಿಗೆ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ವತಿಯಿಂದ ನಡೆಯಲಿರುವ ಶಿಕಾರಿಪುರ ಉದ್ಯೋಗ ಮೇಳದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಉದ್ಯೋಗ ಮೇಳವನ್ನು ಹೆಮ್ಮೆಯ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಮತ್ತು ಶಾಸಕರಾದ ಬಿ.ವೈ. ವಿಜಯೇಂದ್ರ #BYVijayendra ಅವರು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಶಿಕಾರಿಪುರ #Shikaripura ತಾಲೂಕಿನ ಪ್ರತಿಭಾವಂತ ಯುವಕರಿಗೆ ಒಂದೇ ನೆಲೆಯಲ್ಲಿ ಉದ್ಯೋಗ ಒದಗಿಸಿಕೊಡುವ ಉದ್ದೇಶವನ್ನು ಹೊಂದಿದೆ. ಉದ್ಯೋಗಾಕಾಂಕ್ಷಿಗಳಿಗೆ ಇದು ಸುವರ್ಣ ಅವಕಾಶ. ಈ ಉದ್ಯೋಗ ಮೇಳದಲ್ಲಿ 75ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು ಸಾವಿರಾರು ಉದ್ಯೋಗಗಳನ್ನು ನೀಡಲು ಸಿದ್ಧವಾಗಿವೆ. ಯುವಕರು ತಮ್ಮ ವಿದ್ಯಾಭ್ಯಾಸ ಮತ್ತು ಆಸಕ್ತಿಯ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಅದಕ್ಕೂ ಮೊದಲು ಅವರು ಪೂರ್ವ ತಯಾರಿ ನಡೆಸಬೇಕು. ಸಂದರ್ಶನ ನಡೆಯುವಾಗ ಎದುರಾಗುಬಹುದಾದ ಸಮಸ್ಯೆಗಳನ್ನು, ಸಿದ್ಧತೆಯ ಬಗ್ಗೆ ಈ ರೀತಿಯ ಪೂರ್ವ ತರಬೇತಿ ಕಾರ್ಯಕ್ರಮಗಳು ನಿಮಗೆ ಸಹಕಾರಿ ಆಗುತ್ತವೆ. ಉದ್ಯೋಗ ಮೇಳದಲ್ಲಿ ಹೇಗೆ ಸಕ್ರಿಯವಾಗಿ ಭಾಗವಹಿಸಬೇಕು ಎಂಬುದರ ಕುರಿತು ಪ್ರಾಯೋಗಿಕ ತರಬೇತಿಗಳು ಹೆಚ್ಚು ಹೆಚ್ಚು ಬೇಕಾಗುತ್ತದೆ. ಕಡಿಮೆ ಅವಧಿಯಲ್ಲಿ ನಿಮ್ಮ ಪರಿಚಯ ಮಾಡಿಕೊಳ್ಳಲು ಮತ್ತು ಸಂದರ್ಶನ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧಪಡಿಸುವುದನ್ನು ತಿಳಿಯಬಹುದು. ಈ ತರಬೇತಿಗಳು ಮತ್ತು ಸಿದ್ಧತೆಗಳು ಉದ್ಯೋಗ ಮೇಳದಲ್ಲಿ ನಿಮ್ಮ ಅವಕಾಶಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ವಿದ್ಯಾ ಸಂಸ್ಥೆಯ ಪ್ರಮುಖರಾದ ವಿವೇಕ್ ಆಳ್ವ ಅವರು ಉದ್ಯೋಗ ಮೇಳದ ಪೂರ್ವ ತರಬೇತಿ ಕಾರ್ಯಕ್ರಮವು ಉದ್ಯೋಗಾಕಾಂಕ್ಷಿಗಳಿಗೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಉದ್ಯೋಗ ಮೇಳದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಇದರಲ್ಲಿ ಸಂದರ್ಶನ ತರಬೇತಿ, ಕೌಶಲ್ಯ ಅಭಿವೃದ್ಧಿ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದು SSLCಯಿಂದ ಸ್ನಾತಕೋತ್ತರ ಪದವಿಗಳವರೆಗಿನವರಿಗೆ ಮತ್ತು ಅನುಭವಿಗಳಿಗೂ ಉಪಯುಕ್ತವಾಗಿದೆ. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿವೆ. ಉದ್ಯೋಗಾಕಾಂಕ್ಷಿಗಳು ಯಾವುದೇ ಕೆಲಸವನ್ನು ಸಣ್ಣದು ಎಂದು ತಿಳಿಯದೇ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆಳ್ವಾಸ್ ವಿದ್ಯಾ ಸಂಸ್ಥೆಯ ತಂಡದವರು ಈಗಾಗಲೇ ನೋಂದಣಿ ಮಾಡಿಕೊಂಡಿರುವ ಉದ್ಯೋಗಾಕಾಂಕ್ಷಿಗಳಿಗೆ ಅವರ ವಿದ್ಯಾರ್ಹತೆ ಅನುಗುಣವಾಗಿ ವಿಭಾಗಿಸಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳ ಮಾಹಿತಿ ನೀಡುವುದರ ಜೊತೆ ಅಭ್ಯರ್ಥಿಗಳ ಅಭ್ಯಾಸ ಸಂದರ್ಶನ ಮಾಡುವುದರ ಮೂಲಕ, ಅಭ್ಯರ್ಥಿಗಳ ಪ್ರಶ್ನೆ ಮತ್ತು ಸಂದೇಹಗಳಿಗೆ ಉತ್ತರಿಸಿದರು. ಈ ಪೂರ್ವ ತರಬೇತಿ ಕಾರ್ಯಕ್ರಮದಲ್ಲಿ ಉಡುಗಣಿ, ತಾಳಗುಂದ ಹೋಬಳಿಯ ಮತ್ತು ಶಿರಾಳಕೊಪ್ಪ ನಗರದ 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಂ.ಬಿ. ಶಿವಕುಮಾರ್, ಬಿಜೆಪಿ ಪಕ್ಷದ ಪ್ರಮುಖರು, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
ಉದ್ಯೋಗಾಕಾಂಕ್ಷಿ ಶುಭಾ ಉಡುಗಣಿ ಪ್ರಾರ್ಥಿಸಿ, ಉಪನ್ಯಾಸಕರುಗಳಾದ ದೇವರಾಜ್.ವೈ. ಸ್ವಾಗತಿಸಿ, ವೀರೇಂದ್ರ ವಾಲಿ ವಂದಿಸಿ, ರವಿ.ಎಚ್ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















