ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕೂಡ್ಲಿಗೆರೆ ಸಮೀಪದ ಅರಬಿಳಚಿ ಗ್ರಾಮದಲ್ಲಿ ಭದ್ರಾ ನಾಲೆಗೆ ಇಳಿದಿದ್ದ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಅರಬಿಳಚಿ ಗ್ರಾಮದ ನಿವಾಸಿ ನೀಲಾಬಾಯಿ(50), ಅವರ ಪುತ್ರ ರವಿಕುಮಾರ್(23), ಪುತ್ರಿ ಶ್ವೇತಾ(28) ಹಾಗೂ ಅಳಿಯ ಪರಶುರಾಮ್(28) ಗುರುತಿಸಲಾಗಿದೆ.
ಬಟ್ಟೆ ಒಗೆಯುವ ಸಲುವಾಗಿ ಭದ್ರಾ ನಾಲೆಗೆ ಇಳಿದಿದ್ದ ಇವರುಗಳು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ಅರಬಿಳಚಿ ಗ್ರಾಮದಲ್ಲಿ ಜನವರಿ 12 ರಿಂದ 16 ರವರೆಗೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ನಡೆದಿತ್ತು. ಈ ಜಾತ್ರೆಗೆ ನೀಲಾಬಾಯಿ ಅವರ ಮಗಳು ಶ್ವೇತಾ, ತಮ್ಮ ಪತಿ ಪರಶುರಾಮ್ ಮತ್ತು ಇಬ್ಬರು ಮಕ್ಕಳೊಂದಿಗೆ ತವರಿಗೆ ಬಂದಿದ್ದರು. ಶ್ವೇತಾ ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಪರಶುರಾಮ್‌ರೊಂದಿಗೆ ವಿವಾಹವಾಗಿತ್ತು.
ಜಾತ್ರೆ ಗಡಿಬಿಡಿಯಲ್ಲಿ ಬಟ್ಟೆ ಸ್ವಚ್ಚಗೊಳಿಸುವ ಸಲುವಾಗಿ ನಿನ್ನೆ ಭಾನುವಾರ 12 ಗಂಟೆ ಹೊತ್ತಿಗೆ ನಾಲ್ವರು ಎರಡು ಬೈಕ್’ಗಳಲ್ಲಿ ಭದ್ರಾ ನಾಲೆಯ ಬಳಿಗೆ ತೆರಳಿದ್ದರು. ನಾಲೆಯ ಬಳಿ ತಾಯಿ ನೀಲಾಬಾಯಿ ಮತ್ತು ಮಗಳು ಶ್ವೇತಾ ಬಟ್ಟೆ ಒಗೆಯಲು ಮುಂದಾದಾಗ ಇಬ್ಬರೂ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ.
ತಾಯಿ ಮತ್ತು ಸಹೋದರಿಯನ್ನು ರಕ್ಷಿಸುವ ಭರದಲ್ಲಿ ರವಿಕುಮಾರ್ ಹಾಗೂ ಅಳಿಯ ಪರಶುರಾಮ್ ಅವರು ಕೂಡಲೇ ನಾಲೆಗೆ ಧುಮುಕಿದ್ದಾರೆ. ಆದರೆ ನಾಲೆಯಲ್ಲಿ ನೀರಿನ ಹರಿವು ಹೆಚ್ಚಿದ್ದ ಕಾರಣ ನಾಲ್ವರು ಸಹ ದಡ ಸೇರಲಾಗದೆ ನೀರು ಪಾಲಾಗಿದ್ದಾರೆ. ಘಟನೆ ನಡೆದ ಸಮಯದಲ್ಲಿ ಸ್ಥಳದಲ್ಲಿ ಬೇರೆ ಯಾರೂ ಇರಲಿಲ್ಲವಾದ್ದರಿಂದ ತಕ್ಷಣಕ್ಕೆ ಸಹಾಯ ದೊರಕಿಲ್ಲ ಎನ್ನಲಾಗಿದೆ.
ಬಹಳ ಸಮಯ ನಾಲೆಯ ದಂಡೆಯ ಮೇಲೆ ಬಟ್ಟೆಗಳು ಹಾಗೂ ಎರಡು ಬೈಕ್ ಹಾಗೆಯೇ ಇರುವುದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಪೊಲೀಸರು ಠಾಣೆಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೈಕ್ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ನಾಲೆಗೆ ಬಂದವರು ಯಾರೆಂಬ ವಿಷಯ ದೃಢಪಟ್ಟಿದೆ. ಇವರುಗಳ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















