ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತರೀಕೆರೆ ರಸ್ತೆಯ ಶಿವನ ಸರ್ಕಲ್’ಗೆ ಮದರ್ ತೆರೇಸಾ ಸರ್ಕಲ್ ಎಂದು ನಗರಸಭೆಯಿಂದ ನಾಮಫಲಕ ಹಾಕಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಶಿವನಿ ವೃತ್ತಕ್ಕೆ ನಗರಸಭೆ ವತಿಯಿಂದ ಮದರ್ ತೆರೇಸಾ ವೃತ್ತ ಎಂದು ಇತ್ತೀಚೆಗೆ ನಾಮಕರಣ ಮಾಡಲಾಗಿತ್ತು. ಆದರೆ, ಇದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮದರ್ ತೆರೇಸಾ ಹೆಸರು ವಿರೋಧಿಸಿ ಸ್ಥಳೀಯರು ಇಂದು ಶಿವನಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು. ನಂತರ ನಗರಸಭೆವರೆಗೂ ಪ್ರತಿಭಟನೆಯಲ್ಲಿ ತೆರಳಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರಸಭೆ ಮುಂದೆ ಪ್ರತಿಭಟನೆ ನಡೆಸಿದ ಶಿವನಿ ವೃತ್ತದ ಗ್ರಾಮಸ್ಥರು ನಗರಸಭೆ ಆಡಳಿತ ತರಾತುರಿಯಲ್ಲಿ ನಾಮಕರಣ ಮಾಡಿದೆ. ಈ ವೃತ್ತಕ್ಕೆ ಮದರ್ ತೆರೇಸಾ ಎಂದು ನಾಮಕರಣ ಮಾಡುವ ಮೊದಲು ಸ್ಥಳೀಯರ ಅಭಿಪ್ರಾಯ ಸಂಗ್ರಹ ಮಾಡಿಲ್ಲ. ಗ್ರಾಮಸ್ಥರನ್ನು ಕಡೆಗಣಿಸಿ ಈ ಹೆಸರು ಇಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತರಾತುರಿಯಲ್ಲಿ ನಾಮಕರಣ ಮಾಡಿರುವ ಫಲಕವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಎಸ್. ಪದ್ಮ ನಾರಾಯಮ್, ರಾಘವೇಂದ್ರ ಗೌರಪುರ, ದಿವ್ಯ ದರ್ಶ ಕೆ ಎಚ್ ನಗರ, ಅಂತರ ಗಂಗೆ ಶ್ರೀಧರ್, ದೊಡ್ಡೇರಿ ಲೋಕಣ್ಣ, ಮಂಡಕ್ಕಿ ದಿನೇಶ್, ಬಾರಂದೂರು ವೆಂಕೋಬಾ ಹಾಗೂ ಚಂದ್ರು ಮತ್ತಿತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















