ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಭೂತನಗುಡಿಯಲ್ಲಿ ವೃದ್ಧ ದಂಪತಿ ಅನುಮಾನಾಸ್ಪದವಾದ ಸಾವನ್ನಪ್ಪಿದ #SuspiciousDeath ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಜೀವ ಉಳಿಸಬೇಕಾದ ವೈದ್ಯನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್, #SPNikhil ಅನುಮಾನಾಸ್ಪದವಾಗಿ ಶವವಾಗಿ ವೃದ್ಧ ದಂಪತಿ ಪತ್ತೆಯಾಗಿದ್ದ ಪ್ರಕರಣ ಕೊಲೆ ಎಂಬುದು ತಿಳಿದುಬಂದಿದೆ. ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ದಂಪತಿಯ ಸಂಬಂಧಿಯಾದ ಆರ್ಯುವೇದಿಕ್ ವೈದ್ಯನೊಬ್ಬ ಮಲ್ಲೇಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಭೂತನಗುಡಿ ನಿವಾಸಿಗಳಾದ ಚಂದ್ರಪ್ಪ (80) ಹಾಗೂ ಪತ್ನಿ ಜಯಮ್ಮ (70) ದಂಪತಿಗಳಿಬ್ಬರು ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಚಂದ್ರಪ್ಪ ಮನೆಯ ಬೆಡ್ ರೂಂನಲ್ಲಿ ಮಂಚದ ಮೇಲೆ ಹಾಗೂ ಜಯಮ್ಮ ಅವರು ಹಾಲ್’ನ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲಿಯೇ ಸಾವನ್ನಪ್ಪಿದವರು.
ಅನ್ಯೋನ್ಯವಾಗಿದ್ದ ಈ ದಂಪತಿ ಒಂದೇ ವೇಳೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ಕುರಿತು ಭದ್ರಾವತಿಯ ಹಳೇನಗರ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದರು.
ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ಆರ್ಯುವೇದಿಕ್ ವೈದ್ಯ ಮಲ್ಲೇಶ್ ಎನ್ನುವವನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದ್ದು, ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದರು.
ಬಂಧಿತ ಮಲ್ಲೇಶ್ ಚಂದ್ರಪ್ಪ ಅವರಿಂದ ಲಕ್ಷಾಂತರ ರೂ. ಸಾಲ ಕೇಳಿದ್ದ. ಆದರೆ, ಅವರು ಕೊಡಲು ನಿರಾಕರಿಸಿದ್ದರು. ಹೀಗಾಗಿ, ಸಂಚು ರೂಪಿಸಿದ ಆತ, ವೃದ್ಧ ದಂಪತಿಗೆ ಮಂಡಿ ನೋವಿರುವ ಕಾರಣ ಇಂಜಕ್ಷನ್ ನೀಡಿದರೆ ಕಡಿಮೆಯಾಗುತ್ತದೆ ಎಂದು ನಂಬಿಸಿದ್ದಾನೆ. ಜ.19ರಂದು ಮಧ್ಯಾಹ್ನ 12.45ರ ವೇಳೆಗೆ ಚಂದ್ರಪ್ಪ ಅವರ ಮನೆಗೆ ತೆರಳಿ, ಉಭಯ ಕುಶಲೋಪರಿ ವಿಚಾರಿಸಿ Propofol ಎಂಬ ಇಂಜಕ್ಷನ್ ನೀಡಿದ್ದಾನೆ. ಮಾತ್ರವಲ್ಲ, ಇಬ್ಬರೂ ಸಾವಿಗೀಡಾಗಿರುವುದನ್ನು ಖಚಿತಪಡಿಸಿಕೊಂಡು ಅವರ ಮೈಮೇಲಿದ್ದ ಚಿನ್ನಾಭರಣ ಹಾಗೂ ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಏನೂ ಆಗದಂತೆ ತೆರಳಿದ್ದ ಎಂದರು.
ಪೂರ್ವ ನಿಯೋಜಿತ ಕೃತ್ಯ ಇದಾಗಿದ್ದು, ವೈದ್ಯರಿಗೆ ಸಹಜವಾಗಿ ಆನಸ್ತೇಷಿಯಾ ಔಷಧಿ ಸಿಗುತ್ತದೆ. ಆದರೂ ತನಿಖೆ ನಡೆಸಲಾಗುತ್ತಿದೆ ಎಂದರು.
ಚಿನ್ನಾಭರಣ ಕುರಿತ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೊನೆಗೆ ಮನೆಗೆ ಬಂದಿದ್ದು ವೈದ್ಯ ಮಲ್ಲೇಶ್ ಎಂಬ ಮಾಹಿತಿ ಕಲೆ ಹಾಕಲಾಗಿತ್ತು. ಈ ವೈದ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿದ್ದ ಎಂದರು.
ಭದ್ರಾವತಿ ಪೊಲೀಸರಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಗುವುದು ಎಂದರು.
ಮೃತ ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಒಬ್ಬರು ಶಿಕ್ಷಕರಾಗಿದ್ದರೆ, ಮತ್ತೋರ್ವ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರ ಸಂಸ್ಥೆಯಲ್ಲಿ ನೌಕರರಾಗಿದ್ದಾರೆ. ಇನ್ನೊಬ್ಬರು ಶಿವಮೊಗ್ಗದ ಚೀಲೂರು ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದಾರೆ.
ಪ್ರಕರಣದ ತನಿಖೆ ಕಾರ್ಯ ಎಸ್’ಪಿ ನಿಖಿಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರಿಯಪ್ಪ ಮತ್ತು ಬಿ. ರಮೇಶ್ ಇವರ ಮಾರ್ಗದರ್ಶನದಲ್ಲಿ ಭದ್ರಾವತಿ ಡಿವೈಎಸ್’ಪಿ ಪ್ರಕಾಶ್ ರಾಠೋಡ್, ನಗರ ವೃತ್ತ ಸಿಪಿಐ ನಾಗಮ್ಮ, ಹಳೇನಗರ ಪಿಎಸ್’ಐ ಸುನಿಲ್ ಬಿ. ತೇಲಿ, ಎಎಸ್’ಐ ವೆಂಕಟೇಶ್, ಸಿಬ್ಬಂದಿಗಳಾದ ಚಿನ್ನಾ ನಾಯ್ಕ್, ಹಾಲಪ್ಪ, ಸುನಿಲ್ ಕುಮಾರ್, ಕಾಂತರಾಜ್, ಮಂಜುನಾಥ್ ಹಾಗೂ ಬಸವರಾಜ ಅವರುಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















