ಕಲ್ಪ ಮೀಡಿಯಾ ಹೌಸ್ | ಹಾವೇರಿ |
ಕಾಗಿನೆಲೆ ಶ್ರೀ ಆದಿಕೇಶವನಿಗೆ ವಿಶೇಷವಾದ ಸೇವೆಯನ್ನು ಮಾಡುವ ಮೂಲಕ ಶ್ರೀ ರಾಜವಂದ್ಯತೀರ್ಥರು ವೇದಾಂತ ಸಾಮ್ರಾಜ್ಯದಲ್ಲಿ ವಿಶ್ವವಂದ್ಯರಾಗಿದ್ದಾರೆ ಎಂದು ಉಡುಪಿ ಭಂಡಾರಕೇರಿ ಮಠದ ಪೀಠಾಧಿಪತಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಕಾಗಿನೆಲೆ ಆದಿಕೇಶವನ ಸನ್ನಿಧಿಯ ಎದುರು ಇರುವ ಭಂಡಾರಕೇರಿ ಮಠದ ಪರಂಪರೆಯ 26ನೇ ಹಿರಿಯ ಯತಿ ಶ್ರೀ ರಾಜವಂದ್ಯತೀರ್ಥರ ಮೂಲವೃಂದಾವನ ಸನ್ನಿಧಾನದಲ್ಲಿ ಯತಿಗಳ ಆರಾಧನಾ ಉತ್ಸವ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.
18ನೇ ಶತಮಾನದಲ್ಲಿ ಮಧ್ವ ಮತದ ಪೀಠ ಭಂಡಾರಕೇರಿ ಮಠದ ಸಂಸ್ಥಾನಾಧೀಶರಾಗಿ ವಿರಾಜಮಾನರಾಗಿದ್ದ ಶ್ರೀ ರಾಜವಂದ್ಯತೀರ್ಥರು ಮಹಾ ತಪಸ್ವಿಗಳು. ಆದಿಕೇಶವನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದವರು. ಆದ್ದರಿಂದಲೇ ಕೇಶವನ ಸನ್ನಿಧಿ ಎದುರೇ ಅವರು ವೃಂದಾವನಸ್ಥರಾಗಿದ್ದಾರೆ. ಇದನ್ನು ಸ್ಥಳಾಂತರ ಮಾಡಬೇಕು ಎಂದು ಕೆಲವರು ಯತ್ನಿಸಿದರೂ ದೇವರ ಆಜ್ಞೆಯಂತೆ ಯಥಾಸ್ಥಿತಿ ಪಾಲನೆಯಾಗಿರುವುದು ಶ್ರೀಗಳ ತಪಸ್ಸಿನ ಶಕ್ತಿಗೆ ನಿದರ್ಶನವಾಗಿದೆ ಎಂದರು.
ಕನಕ ಸಾಹಿತ್ಯ ಉಳಿಸಿ: ಕನಕದಾಸರ ಸಾಹಿತ್ಯ ವಿಶ್ವಮಾನ್ಯವಾಗಿದೆ. ಈ ಸಾಹಿತ್ಯಕ್ಕೆ ಯಾವುದೇ ಜಾತಿ- ಮತಗಳ ತಾರತಮ್ಯ ಮಾಡದೇ ಅದನ್ನು ಉಳಿಸಿ ಬೆಳೆಸಬೇಕು ಎಂದು ಶ್ರೀ ವಿದ್ಯೇಶತೀರ್ಥರು ಇದೇ ಸಂದರ್ಭದಲ್ಲಿ ಸಂದೇಶ ನೀಡಿದರು.
ವೃಂದಾವನ ಸಂರಕ್ಷಣೆ:
ಯಾವ ಸಂಚಾರ ವ್ಯವಸ್ಥೆಯೂ ಇಲ್ಲದ ಕಾಲದಲ್ಲಿ ಕಾಲ್ನಡಿಗೆಯಲ್ಲೇ ದೇಶ ಸಂಚಾರ ಮಾಡುತ್ತಿದ್ದ ಸಂದರ್ಭ ನಮ್ಮ ಹಿರಿಯ ಯತಿಗಳು ಈ ಕ್ಷೇತ್ರದಲ್ಲಿ ವೃಂದಾವನಸ್ಥರಾಗಿದ್ದಾರೆ. ಈ ಸನ್ನಿಧಿಯನ್ನು (ಶಿಲಾಮಂಟಪ) ಕಳೆದ 2 ವರ್ಷದ ಹಿಂದೆ ನವೀಕರಣಗೊಳಿಸಿ ವೃಂದಾವನ ಸಂರಕ್ಷಣೆ ಮಾಡಲಾಗಿದೆ. ನಾಡಿನ ಸಂಸ್ಕೃತಿ ಮತ್ತು ಮಾಧ್ವ ಪರಂಪರೆಗೆ ಇದು ಪ್ರತೀಕವಾಗಿದೆ ಎಂದು ಶ್ರೀಗಳು ನುಡಿದರು.
ಅಚ್ಯುತಾಚಾರ್ಯರು ರಾಜವಂದ್ಯತೀರ್ಥರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿದರು. ಹಿರಿಯ ಯತಿಗಳ ವೃಂದಾವನದ ಎದುರು ಶ್ರೀಗಳು ಸಂಸ್ಥಾನ ಪೂಜೆ ನೆರವೇರಿಸಿದರು. ಮಹಾ ಮಂಗಳಾರತಿ ಸಮರ್ಪಿಸಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ವಿದ್ವಾನ್ ನಾಗೇಂದ್ರ ಆಚಾರ್ಯ, ಶ್ರೀಮಠದ ಶಿಷ್ಯರು ಮತ್ತು ಭಕ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















