ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉನ್ನತ ಗುಣಮಟ್ಟದ ಮೂತ್ರಶಾಸ್ತ್ರ #Urology ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಮಹತ್ವದ ಸಾಧನೆಯೊಂದನ್ನು ಮಾಡಿದೆ. ಪ್ರಾಸ್ಟೇಟ್ ಸಮಸ್ಯೆಗೆ ಪರಿಹಾರ ನೀಡುವ ಅತ್ಯಾಧುನಿಕ ‘ಟ್ರಾನ್ಸ್ಯುರೆಥ್ರಲ್ ರಿಸೆಕ್ಷನ್ ಆಫ್ ದಿ ಪ್ರಾಸ್ಟೇಟ್’ #TURP ಶಸ್ತ್ರಚಿಕಿತ್ಸೆಯನ್ನು ಬರೋಬ್ಬರಿ 1,000 ರೋಗಿಗಳಿಗೆ ಯಶಸ್ವಿಯಾಗಿ ಪೂರೈಸುವ ಮೂಲಕ ಆಸ್ಪತ್ರೆ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆಯಿಂದ ಉಂಟಾಗುವ ಮೂತ್ರದ ಸಮಸ್ಯೆಗಳಿಗೆ ಈ TURP ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಆಸ್ಪತ್ರೆಯ ಹಿರಿಯ ಮೂತ್ರಶಾಸ್ತ್ರ ತಜ್ಞರಾದ #Urologists ಡಾ. ಪ್ರಭುಲಿಂಗ ಕೊಣ್ಣೂರು ಮತ್ತು ಡಾ. ಅವಿನಾಶ್ ಅವರ ನೇತೃತ್ವದ ತಂಡವು ಈ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದೆ.
ಇವೆಲ್ಲವೂ ಕನಿಷ್ಠ ಆಕ್ರಮಣಾಕಾರಿ ಶಸ್ತ್ರಚಿಕಿತ್ಸಾ ವಿಧಾನಗಳಾಗಿದ್ದು #MinimallyInvasive ಅತ್ಯುತ್ತಮ ಫಲಿತಾಂಶಗಳನ್ನು ಕಂಡಿವೆ ಮತ್ತು ರೋಗಿಗಳು ಕೂಡ ಶೀಘ್ರವಾಗಿ ಚೇತರಿಸಿಕೊಂಡಿದ್ದಾರೆ. ಈ ಸಾಧನೆಯು ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಾಸ್ಟೇಟ್ ಆರೈಕೆಗಾಗಿ ಈ ಆಸ್ಪತ್ರೆ ಪ್ರಮುಖ ಕೇಂದ್ರವಾಗಿರುವುದನ್ನು ಸಾಬೀತುಪಡಿಸಿದೆ.
ಆರಂಭದಲ್ಲಿ ಆಸ್ಪತ್ರೆಯು ಸಾಂಪ್ರದಾಯಿಕ ‘ಎಲೆಕ್ಟ್ರೋಕಾಟರಿ’ #Electrocautery ತಂತ್ರಜ್ಞಾನವನ್ನು ಬಳಸಿ ಈ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿತ್ತು. ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಆಧುನಿಕತೆಗೆ ತೆರೆದುಕೊಂಡ ಈ ಆಸ್ಪತ್ರೆಯು, ಇದೀಗ ಸುಧಾರಿತ ‘100-ವ್ಯಾಟ್ ಹೋಲ್ಮಿಯಂ ಲೇಸರ್’ #HolmiumLaser ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.
ಈ ಬಗ್ಗೆ ಮಾತನಾಡಿದ ಕನ್ಸಲ್ಟೆಂಟ್ ಯೂರಾಲಜಿಸ್ಟ್ ಡಾ. ಪ್ರಭುಲಿಂಗ ಕೊಣ್ಣೂರು, “ನಮ್ಮ ವಿಭಾಗದ ಈ ಸಾಧನೆಗೆ ರೋಗಿಗಳ ನಂಬಿಕೆ ಮತ್ತು ನಮ್ಮ ತಂಡದ ಶ್ರಮವೇ ಕಾರಣ. 1,000 ಶಸ್ತ್ರಚಿಕಿತ್ಸೆಗಳನ್ನು ಪೂರೈಸಿರುವುದು ಕೇವಲ ಒಂದು ಸಂಖ್ಯೆ ಅಷ್ಟೇ ಅಲ್ಲ, ಬದಲಿಗೆ ರೋಗಿಗಳು ನಮ್ಮ ಮೇಲಿಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ. ಹಳೆಯ ಎಲೆಕ್ಟ್ರೋಕಾಟರಿ ಪದ್ಧತಿ ಉತ್ತಮವಾಗಿದ್ದರೂ, ಹೋಲ್ಮಿಯಂ ಲೇಸರ್ ತಂತ್ರಜ್ಞಾನದ ಆಗಮನವು ಪ್ರಾಸ್ಟೇಟ್ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಇದು ಹೆಚ್ಚು ನಿಖರ ಮತ್ತು ಸುರಕ್ಷಿತ,” ಎಂದು ಅಭಿಪ್ರಾಯಪಟ್ಟರು.
ಏನಿದು ಹೋಲ್ಮಿಯಂ ಲೇಸರ್ TURP?
ಇದನ್ನು ಲೇಸರ್ ಪ್ರಾಸ್ಟೇಟೆಕ್ಟಮಿ ಎಂದೂ ಕರೆಯುತ್ತಾರೆ. ಇದರಲ್ಲಿ ಶಕ್ತಿಶಾಲಿ ಲೇಸರ್ ಕಿರಣಗಳನ್ನು ಬಳಸಿ, ಅಡೆತಡೆ ಉಂಟುಮಾಡುವ ಮಾಂಸದ ಬೆಳವಣಿಗೆಯನ್ನು ನಿಖರವಾಗಿ ತೆಗೆದುಹಾಕಲಾಗುತ್ತದೆ. ಅದೇ ಸಮಯದಲ್ಲಿ ರಕ್ತನಾಳಗಳನ್ನು ಸೀಲ್ ಮಾಡುವುದರಿಂದ ರಕ್ತಸ್ರಾವ ತೀರಾ ಕಡಿಮೆ ಇರುತ್ತದೆ.
ಈ ಆಧುನಿಕ ವಿಧಾನದಿಂದ ಹಲವು ಪ್ರಯೋಜನಗಳಿವೆ. ರಕ್ತಸ್ರಾವ #Bleeding ಕಡಿಮೆ ಇರುವುದರಿಂದ ವಯಸ್ಸಾದವರಿಗೆ ಮತ್ತು ರಕ್ತ ತೆಳುವಾಗುವ ಮಾತ್ರೆಗಳನ್ನು ತೆಗೆದುಕೊಳ್ಳುವ ರೋಗಿಗಳಿಗೆ ಇದು ತುಂಬಾ ಸುರಕ್ಷಿತ. ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಾರೆ, ನೋವು ಕಡಿಮೆ ಇರುತ್ತದೆ, ಕೆಥೆಟರ್ ಅಳವಡಿಕೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತಂಗುವ ಅವಧಿ ಕೂಡ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ, ದೊಡ್ಡ ಗಾತ್ರದ ಪ್ರಾಸ್ಟೇಟ್ ಗ್ರಂಥಿಗಳಿಗೂ ಇದು ಪರಿಣಾಮಕಾರಿ ಚಿಕಿತ್ಸೆಯಾಗಿದೆ.
ಕನ್ಸಲ್ಟೆಂಟ್ ಯೂರಾಲಜಿಸ್ಟ್ ಡಾ. ಅವಿನಾಶ್ ಮಾತನಾಡಿ, “ಈ ಹೊಸ ಯಂತ್ರದ ಪ್ರಯೋಜನಗಳು ರೋಗಿಗಳ ಚೇತರಿಕೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿವೆ. ನಿಖರವಾದ ಲೇಸರ್ ತಂತ್ರಜ್ಞಾನದಿಂದಾಗಿ ಅಡ್ಡಪರಿಣಾಮಗಳು ತೀರಾ ಕಡಿಮೆ. ರೋಗಿಗಳು ಶೀಘ್ರವಾಗಿ ತಮ್ಮ ದೈನಂದಿನ ಕೆಲಸಗಳಿಗೆ ಮರಳಬಹುದು ಮತ್ತು ಇಲ್ಲಿಯವರೆಗೆ ನಾವು ಕಂಡ ಫಲಿತಾಂಶಗಳು ಅತ್ಯಂತ ಆಶಾದಾಯಕವಾಗಿವೆ,” ಎಂದು ಹೇಳಿದರು.
ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮೂತ್ರದ ಹರಿವು ಕಡಿಮೆಯಾಗುವುದು #WeakStream ರಾತ್ರಿ ವೇಳೆ ಪದೇ ಪದೇ ಮೂತ್ರಕ್ಕೆ ಹೋಗುವುದು ಅಥವಾ ಮೂತ್ರಕೋಶ ಸಂಪೂರ್ಣ ಖಾಲಿಯಾಗದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣುವಂತೆ ಇಬ್ಬರೂ ವೈದ್ಯರು ಸಲಹೆ ನೀಡಿದ್ದಾರೆ. ಆರಂಭದಲ್ಲೇ ರೋಗ ಪತ್ತೆಯಾದರೆ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವರ್ಗೀಸ್ ಪಿ ಜಾನ್ ಮಾತನಾಡಿ, “ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಈಗ ಅತ್ಯಾಧುನಿಕ ಲೇಸರ್ ಶಸ್ತ್ರಚಿಕಿತ್ಸೆ #LaserSurgery ಲಭ್ಯವಿರುವುದರಿಂದ, ಮಲೆನಾಡು ಭಾಗದ ಮತ್ತು ನೆರೆಯ ಜಿಲ್ಲೆಗಳ ರೋಗಿಗಳು ಇನ್ಮುಂದೆ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿನಂತಹ ಮಹಾನಗರಗಳಿಗೆ ಅಲೆಯಬೇಕಿಲ್ಲ,” ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















