ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜನಸೇರುವ ಕಡೆ, ಜಾತ್ರೆ ಹಾಗೂ ದೇವಾಲಯಗಳಲ್ಲಿ ಜೇಬುಗಳ್ಳತನ ಮಾಡುತ್ತಿದ್ದ ಸುಂದರ ಮಹಿಳೆ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್. ಪುರ #KRPuram ಠಾಣೆ ಪೊಲೀಸರು ಈ ದಂಪತಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಅವರು ಬಾಯಿ ಬಿಟ್ಟ ವಿಚಾರ ಕೇಳಿ ಪೊಲೀಸರೇ ಒಂದು ಕ್ಷಣ ಹೌರಾರಿದ್ದಾರೆ.
ಹೌದು… ಪೊಲೀಸರ ವಿಚಾರಣೆ ವೇಳೆ ಈಕೆ ಪ್ರತಿ ತಿಂಗಳು #Makeup ಮೇಕಪ್’ಗೆ 5 ಲಕ್ಷ ರೂ. ವೆಚ್ಚ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಕಮ್ಮಸಂದ್ರ ಬಳಿಯ ಸಂಪಿಗೆ ನಗರದ ಗಾಯತ್ರಿ ಹಾಗೂ ಶ್ರೀಕಾಂತ್ ಬಂಧಿತರಾಗಿದ್ದು, ಆರೋಪಿಗಳಿಂದ 60 ಲಕ್ಷ ರು. ಮೌಲ್ಯದ 398 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ದೇವಸಂದ್ರದ ಮಾರಿಯಮ್ಮ ದೇವಾಲಯಕ್ಕೆ ತೆರಳಿದ್ದಾಗ ಕುವೆಂಪು ಲೇಔಟ್ ಲಕ್ಷ್ಮಮ್ಮ ಅವರ 30 ಚಿನ್ನದ ಸರ ಕಳವಾಗಿತ್ತು. ಈ ಕೃತ್ಯದ ತನಿಖೆಗಿಳಿದ ಇನ್ಸ್ಪೆಕ್ಟರ್ ಬಿ. ರಾಮಮೂರ್ತಿ ನೇತೃತ್ವದ ತಂಡ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಖದೀಮ ದಂಪತಿಯನ್ನು ಬಂಧಿಸಿದೆ.
ತನ್ನ ಮೇಲೆ ಶಂಕೆ ಬಾರದಂತೆ ಎಚ್ಚರಿಕೆ ವಹಿಸಿದ್ದ ಗಾಯತ್ರಿ, ಅಂದವಾಗಿ ಮೇಕಪ್ ಮಾಡಿಕೊಂಡು ಮಿರಮಿರ ಮಿಂಚುವ ದಿರಿಸು ಧರಿಸಿ ಹೋಗುತ್ತಿದ್ದಳು. ಆಕೆಯ ಪ್ರತಿ ತಿಂಗಳ ಮೇಕಪ್ ಖರ್ಚು ವೆಚ್ಚಕ್ಕೆ 4 ರಿಂದ 5 ಲಕ್ಷ ರೂ. ವ್ಯಯವಾಗಿದೆ ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ತನಗೆ ಮೇಕಪ್ ಇಲ್ಲದೆ ಹೋದರೆ ಆಗಲ್ಲ. ನಾನು ದೇಹ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುತ್ತೇನೆ. ಚೆನ್ನಾಗಿ ಕಾಣುವಂತೆ ದುಬಾರಿ ಬೆಲೆಯ ಸೀರೆ ಹಾಕಿಕೊಂಡು ದೇವಾಲಯ ಹಾಗೂ ಜಾತ್ರೆಗಳಿಗೆ ಹೋದರೆ ಯಾರೊಬ್ಬರಿಗೂ ಅನುಮಾನ ಬರುತ್ತಿರಲಿಲ್ಲ. ಇದರಿಂದ ಒಡವೆ ಧರಿಸಿದ ಮಹಿಳೆಯರ ಸನಿಹಕ್ಕೆ ಹೋಗಿ ಕಳ್ಳತನ ಎಸಗಲು ಅನುಕೂಲವಾಗುತ್ತಿತ್ತು ಎಂದು ಗಾಯತ್ರಿ ಹೇಳಿಕೆ ನೀಡಿದ್ದಾಳೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















