ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ನಗರದಲ್ಲಿ ಬಹು ವರ್ಷಗಳಿಂದ ಸಾರ್ವಜನಿಕರು ಸಾಕಷ್ಟು ಟ್ರಾಫಿಕ್ ಸಮಸ್ಯೆ ಹಾಗೂ ಕಿರಿಕಿರಿ ಅನುಭವಿಸುತ್ತಿದ್ದ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ರಸ್ತೆಯ ಭಾಗವನ್ನು ಚತುಷ್ಪಥವಾಗಿ ಅಭಿವೃದ್ದಿಪಡಿಸಲು ದಕ್ಷಿಣ ರೈಲ್ವೆಯಿಂದ #SouthernRailway ಅನುಮೋದನೆ ದೊರೆತಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಕಚೇರಿ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದರ ಕಚೇರಿ, ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ನಲ್ಲಿ #LevelCrossing ಉಂಟಾಗಿರುವ ಗಂಭೀರ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿದೆ. ಅದರಂತೆ ಈ ಸಮಸ್ಯೆಯ ಗಂಭೀರತೆ ಅರಿತ ಸಂಸದ ಕ್ಯಾ. ಬ್ರಿಜೇಶ್ ಚೌಟ #MP Brijesh Chowta ಅವರು, ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ರೈಲ್ವೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಮಾತ್ರವಲ್ಲದೇ ಈ ಲೆವೆಲ್ ಕ್ರಾಸಿಂಗ್‌ನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ರೈಲ್ವೆ ಅಧಿಕಾರಿಗಳು ಸಮನ್ವಯತೆಯಿಂದ ಪರಿಹಾರ-ಮಾರ್ಗೋಪಾಯಗಳ ಬಗ್ಗೆ ಸಮಗ್ರ ವರದಿಯನ್ನು ತಯಾರಿಸಬೇಕು ಹಾಗೂ ಈ ವರದಿಯನ್ನು ರೈಲ್ವೆ ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಮನಪಾ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು. ಪಾಲಿಕೆ ನೀಡುವ ಈ ವರದಿ ಸಮಸ್ಯೆಯ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿರಲಿದೆ ಎಂದು ಸಂಸದರು ಒತ್ತಿ ಹೇಳಿದ್ದರು.
ದಕ್ಷಿಣ ರೈಲ್ವೆ ವ್ಯಾಪ್ತಿಗೆ ಸೇರಿರುವ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ರಸ್ತೆಯನ್ನು ನಾಲ್ಕು ಪಥಗಳ ರಸ್ತೆಯಾಗಿ ಅಭಿವೃದ್ಧಿಪಡಿಸುವುದಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ದಕ್ಷಿಣ ರೈಲ್ವೆಯ ಜಿಎಂ ಹಾಗೂ ಪಾಲಕ್ಕಾಡ್ ವಿಭಾಗದ ಡಿಆರ್‌ಎಂ ಅವರೊಂದಿಗೆ ಸಂಸದರು ನಿರಂತರ ಚರ್ಚೆ ನಡೆಸಿದ ಹಿನ್ನಲೆಯಲ್ಲಿ ಈ ರೈಲ್ವೆ ಗೇಟ್ ವ್ಯಾಪ್ತಿಯ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ಗಂಭೀರ ಸಮಸ್ಯೆಗೆ ಪರಿಹಾರ ಒದಗಿಸುವುದಕ್ಕೆ ಸಾಧ್ಯವಾಗಿದೆ. ಈ ಲೆವೆಲ್ ಕ್ರಾಸಿಂಗ್ ರಸ್ತೆ ಅಗಲೀಕರಣಕ್ಕೆ ಸದ್ಯ ಅಂದಾಜು ಪಟ್ಟಿ ಸಿದ್ಧಪಡಿಸಲಾಗುತ್ತದೆ.
ಮಾರ್ಚ್ ಅಂತ್ಯದೊಳಗೆ ಪಾಂಡೇಶ್ವರ ಲೆವಲ್ ಕ್ರಾಸಿಂಗ್ ರಸ್ತೆ ಅಗಲೀಕರಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಇಲ್ಲಿ ಮನಪಾ ವ್ಯಾಪ್ತಿಗೆ ಸಂಬಂಧಪಟ್ಟ ಚತುಷ್ಪಥ ರಸ್ತೆ ಇದ್ದು, ರೈಲ್ವೆ ವ್ಯಾಪ್ತಿಯ ರಸ್ತೆ ಮಾತ್ರ ದ್ವಿಪಥವಾಗಿದೆ. ಇಲ್ಲಿ ಅಗಲೀಕರಣಗೊಂಡರೆ ಲೆವೆಲ್ ಕ್ರಾಸಿಂಗ್ ರಸ್ತೆ ಕೂಡ ಚತುಷ್ಪಥ ರಸ್ತೆಯಾಗಿ ವಾಹನ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಜತೆಗೆ ಸುರಕ್ಷತೆಗಾಗಿ ‘ಡಬಲ್ ಬೂಮ್’ ಆಟೋಮ್ಯಾಟಿಕ್ ಗೇಟ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಇದರಿಂದ ಈ ರಸ್ತೆಯಲ್ಲಿ ಭವಿಷ್ಯದಲ್ಲಿ ಸುಗಮ ಸಂಚಾರದ ಜತೆಗೆ ಟ್ರಾಫಿಕ್ ದಟ್ಟನೆ ಸಮಸ್ಯೆಯೂ ಬಗೆಹರಿಯಲಿದೆ ಎಂದು ಸಂಸದರ ಕಚೇರಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















