ಕಲ್ಪ ಮೀಡಿಯಾ ಹೌಸ್ | ಉಡುಪಿ |
ಇಲ್ಲಿನ ಕಟಪಾಡಿ ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ #National Highway ಅನಿಲ ಟ್ಯಾಂಕರೊಂದು ಪಲ್ಟಿಯಾಗಿ ರಸ್ತೆ ಅಡ್ಡಲಾಗಿ ಬಿದ್ದಿದ್ದು, #Gas tanker overturn ಆತಂಕ ಸೃಷ್ಠಿಯಾಗಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಎಲ್’ಪಿಜಿ ಅನಿಲ ಸಾಗಿಸುತ್ತಿದ್ದ ಬುಲೆಟ್ ಟ್ಯಾಂಕರ್ ಪಲ್ಟಿಯಾಗಿದೆ.
ಟ್ಯಾಂಕರ್’ನಿಂದ ಅನಿಲ ಸೋರಿಕೆ ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ. ಕಟಪಾಡಿ ಜಂಕ್ಷನ್’ನಲ್ಲಿ ಅಂಡರ್’ಪಾಸ್ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯನ್ನು ಡೈವರ್ಶನ್ ಮಾಡಲಾಗಿತ್ತು. ವೇಗವಾಗಿ ಬಂದ ಟ್ಯಾಂಕರ್ ಈ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ ಎನ್ನಲಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಗ್ನಿ ಶಾಮಕ ದಳದವರು ಟ್ಯಾಂಕರ್ ಮೇಲೆ ನಿರಂತರ ನೀರು ಹಾಯಿಸುವ ಮೂಲಕ ಟ್ಯಾಂಕರ್ ಉಷ್ಣಾಂಶ ಕಡಿಮೆ ಮಾಡಲು ಪ್ರಯತ್ನಿಸುತ್ತಾ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಅಪಘಾತದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಸಾರ್ವಜನಿಕ ಸುರಕ್ಷತೆಗಾಗಿ ಮಾರ್ಚ್ 16ರ ಇಂದು ರಾತ್ರಿ 8 ಗಂಟೆಯವರೆಗೆ ಜಾರಿಯಲ್ಲಿರುವಂತೆ ಸಂಚಾರ ಮಾರ್ಗ ಬದಲಾವಣೆ ಆದೇಶ ಹೊರಡಿಸಿದ್ದಾರೆ.
ಮಂಗಳೂರಿನಿಂದ ಉಡುಪಿ ಕಡೆಗೆ: ವಾಹನಗಳು ಕಾಪುವಿನಿಂದ ಶಿರ್ವಾ – ಮೂಡುಬೆಳ್ಳೆ – ಮಣಿಪುರ ಮಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿ ತಲುಪುವುದು ಅಥವಾ ಪಡುಬಿದ್ರೆ – ಬೆಳ್ಳಣ್ – ಶಿರ್ವಾ ಮಾರ್ಗವಾಗಿ ಮಣಿಪಾಲಕ್ಕೆ ತೆರಳಬಹುದು.
ಉಡುಪಿಯಿಂದ ಮಂಗಳೂರು ಕಡೆಗೆ: ವಾಹನಗಳು ಮಣಿಪಾಲದಿಂದ ಮಣಿಪುರ – ಮೂಡುಬೆಳ್ಳೆ- ಶಿರ್ವಾ ಮಾರ್ಗವಾಗಿ ಕಾಪು ತಲುಪಿ ಮಂಗಳೂರಿಗೆ ಸಾಗುವುದು. ಅಥವಾ ಮಣಿಪಾಲ – ಶಿರ್ವಾ – ಬೆಳ್ಳಣ್ ಮಾರ್ಗವಾಗಿ ಪಡುಬಿದ್ರೆ ತಲುಪಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















