ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ #Solid waste management ಸಮರ್ಪಕವಾಗಿ ನಡೆಯದೇ ಸಾರ್ವಜನಿಕ ಆರೋಗ್ಯ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿರುವ ವಿಷಯವನ್ನು ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ #D S Arun ಸರ್ಕಾರದ ಗಮನಕ್ಕೆ ತಂದರು.
ಘನ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಲ್ಲಿ ಭಾರೀ ಅವ್ಯವಸ್ಥೆಗಳು ಕಂಡುಬರುತ್ತಿದ್ದು, ಈ ವ್ಯವಸ್ಥೆ ಕ್ರಮೇಣ ಮಾಫಿಯಾ ಸ್ವರೂಪಕ್ಕೆ ತಿರುಗುತ್ತಿದೆ. ಕಸ ಸಂಸ್ಕರಣೆ ವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿಲ್ಲದೆ, ಅಧಿಕಾರಿಗಳ ಹೊಣೆಗಾರಿಕೆಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಶಾಸಕರು ಟೀಕಿಸಿದರು.
ರಾಜ್ಯದಲ್ಲಿ ಉತ್ಪತ್ತಿಯಾಗುವ ಕಸದ ಪ್ರಮಾಣದ ಲೆಕ್ಕಾಚಾರದಲ್ಲಿಯೇ ದೊಡ್ಡ ಮಟ್ಟದ ಅಸಂಗತತೆ ಇದೆ ಎಂದು ಪ್ರಶ್ನಿಸಿದರು. 100 ಟನ್ ಕಸ ಉತ್ಪತ್ತಿಯಾದರೆ ಕೇವಲ 50 ಟನ್ ಮಾತ್ರ ದಾಖಲಾಗುತ್ತಿದೆ ಎಂಬುದು ಗಂಭೀರ ಅನುಮಾನಕ್ಕೆ ಕಾರಣವಾಗಿದೆ. ಹೆಚ್ಚಿನ ಪ್ರಮಾಣದ ಕಸವನ್ನು ಡಂಪಿಂಗ್ ಯಾರ್ಡ್‌ಗಳಿಗೆ ಕಳುಹಿಸಲಾಗುತ್ತಿದ್ದು, ಮರುಬಳಕೆ ಹಾಗೂ ಉಪ ಉತ್ಪನ್ನಗಳ ಅಭಿವೃದ್ಧಿಗೆ ಯಾವುದೇ ಆದ್ಯತೆ ನೀಡಲಾಗುತ್ತಿಲ್ಲವೆಂದು ಅವರು ಆರೋಪಿಸಿದರು.
ಅಲ್ಲದೇ, ಹೆಚ್ಚುವರಿ ಕಸವನ್ನು ಗ್ರಾಮೀಣ ಪ್ರದೇಶಗಳಲ್ಲಿ ಸುರಿಯುತ್ತಿರುವ ಘಟನೆಗಳತ್ತ ಗಮನ ಸೆಳೆದು, ಇದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಹಾಗೂ ಪೌರಾಡಳಿತ ಇಲಾಖೆಗಳ ಸಮನ್ವಯದ ಮೂಲಕ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕೆಂದು ಒತ್ತಾಯಿಸಿದರು.
ಇ-ವೆಸ್ಟ್ ಹಾಗೂ ಮೆಡಿಕಲ್ ವೆಸ್ಟ್‌ನಂತಹ ಅಪಾಯಕಾರಿ ತ್ಯಾಜ್ಯಗಳ ನಿರ್ವಹಣೆಯಲ್ಲಿಯೂ ನಿರ್ಲಕ್ಷ್ಯ ಮುಂದುವರಿದಿದ್ದು, ಇದರ ಪರಿಣಾಮವಾಗಿ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಹಾಗೂ ಪರಿಸರಕ್ಕೆ ದೀರ್ಘಕಾಲಿಕ ಹಾನಿ ಸಂಭವಿಸುತ್ತಿದೆ ಎಂದು ಎಚ್ಚರಿಸಿದರು.
2016ರ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು ಜಾರಿಯಾದು ದಶಕವಾಗುತ್ತಿದ್ದರೂ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.
ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಮಾಫಿಯಾ ಪ್ರಭಾವದಿಂದ ಮುಕ್ತಗೊಳಿಸಿ, ಜನಾರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ತಕ್ಷಣವೇ ಪಾರದರ್ಶಕ, ಕಟ್ಟುನಿಟ್ಟಾದ ಮತ್ತು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಡಿ.ಎಸ್. ಅರುಣ್ ಅವರು ಸರ್ಕಾರವನ್ನು ಎಚ್ಚರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















