ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೈಸೂರು ಶಿವಮೊಗ್ಗ ತಾಳಗುಪ್ಪ ನಡುವಿನ ಎಸ್ಕ್ಪ್ರೆಸ್ ರೈಲಿಗೆ ಅತ್ಯಾಧುನಿಕ LBH ಬೋಗಿಗಳನ್ನು ಅಳವಡಿಸಲಾಗುತ್ತಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಮಾಹಿತಿ ನೀಡಿದ್ದು, 16205/16206 ಸಂಖ್ಯೆಯ ತಾಳಗುಪ್ಪ–ಮೈಸೂರು–ತಾಳಗುಪ್ಪ ಡೈಲಿ ಎಕ್ಸ್ ಪ್ರೆಸ್ ರೈಲುಗಳ ಹಳೆಯ ಮಾದರಿಯ ಐಸಿಎಫ್ ಬೋಗಿಗಳನ್ನು ತೆಗೆದುಹಾಕಿ, ಅವುಗಳ ಬದಲಿಗೆ ಅತ್ಯಾಧುನಿಕ ಲಿಂಕ್ ಹಾಫ್ಮನ್ ಬುಶ್ (LHB) ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ.
ಈ ಹೊಸ ಸುಧಾರಿತ ಬೋಗಿಗಳ ಸೇವೆಯು 2026ರ ಏಪ್ರಿಲ್ 8 ರಿಂದ ತಾಳಗುಪ್ಪ ಮತ್ತು ಮೈಸೂರು ಎರಡೂ ನಿಲ್ದಾಣಗಳಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ.
ಈ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯ ನಂತರ ಈ ರೈಲು ಒಟ್ಟು 18 ಎಲ್ಎಚ್’ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಇದರಲ್ಲಿ ಒಂದು ಎಸಿ ಚೇರ್ ಕಾರ್, ಐದು ದ್ವಿತೀಯ ದರ್ಜೆ ಚೇರ್ ಕಾರ್ ಬೋಗಿಗಳು ಹಾಗೂ ಹತ್ತು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಇರಲಿವೆ.
ಇದರೊಂದಿಗೆ ದಿವ್ಯಾಂಗ ಸ್ನೇಹಿ ಸೌಲಭ್ಯವನ್ನು ಹೊಂದಿರುವ ದ್ವಿತೀಯ ದರ್ಜೆ ಮತ್ತು ಲಗೇಜ್ ಬ್ರೇಕ್ ವ್ಯಾನ್ ಹಾಗೂ ಇನ್ನೊಂದು ಲಗೇಜ್-ಕಮ್-ಬ್ರೇಕ್ ವ್ಯಾನ್ ಈ ರೈಲಿನ ಸಂಯೋಜನೆಯಲ್ಲಿ ಇರಲಿವೆ.
ಈ ಆಧುನಿಕೀಕರಣದಿಂದಾಗಿ ಪ್ರಯಾಣಿಕರು ಇನ್ನು ಮುಂದೆ ಮೈಸೂರು ಮತ್ತು ತಾಳಗುಪ್ಪ ನಡುವೆ ಸುಲಲಿತ, ಸುರಕ್ಷಿತ ಹಾಗೂ ಅತ್ಯಂತ ಆರಾಮದಾಯಕ ಪ್ರಯಾಣವನ್ನು ನಿರೀಕ್ಷಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















