ಕಲ್ಪ ಮೀಡಿಯಾ ಹೌಸ್ | ಸೊರಬ |
ಗ್ರಾಮಾಂತರ ಪ್ರದೇಶಗಳ ಪಾರಂಪರಿಕ ಕಲೆ ಹಸೆ, ಹಚ್ಚೆ, ಭೂಮಣ್ಣಿ ಬುಟ್ಟಿ ಚಿತ್ತಾರಗಳನ್ನು ಅಧ್ಯಯಿನಿಸಿ ಜಗತ್ತಿಗೆ ಪರಿಚಯಿಸುತ್ತಿರುವ ಗೀತಾಭಟ್ ತಂಡದ ಕಾರ್ಯಕ್ಕೆ ಹೆಚ್ಚೆ ಗ್ರಾಮದ ಪ್ರಮುಖ ಹೊಂದಾಸನ ಧರ್ಮಪ್ಪ ಮೆಚ್ಚುಗೆ ಸೂಚಿಸಿದರು.
ತಾಲ್ಲೂಕು ಹೆಚ್ಚೆ ಗ್ರಾಮದಲ್ಲಿ ಬೆಂಗಳೂರಿನ ಸ್ಥಳೀಯ ಕಲೆಯ ಪುನರುಜ್ಜೀವನದ ಕೇಂದ್ರದವರು ರಚಿಸಿರುವ ದೀವರ ಚಿತ್ತಾರ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಲೆಯ ಮಹತ್ವ ಗೊತ್ತಿಲ್ಲದ ನಮ್ಮ ಗ್ರಾಮಾಂತರ ಪ್ರದೇಶದ ಕಲೆಯನ್ನು ವಿಶ್ವವ್ಯಾಪಿಯಾಗಿಸುವ ಜೊತೆಗೆ ಕಲೆಯ ಪುನರುಜ್ಜೀವನದ ಕಾಳಜಿ ಹೊಂದಿರುವ ಅವರ ಈ ಸೃಜನಾತ್ಮಕ ಚಟುವಟಿಕೆಗೆ ಗ್ರಾಮದ ಪರವಾಗಿ, ತಾಲ್ಲೂಕು ಗ್ರಾಮಾಂತರ ಪ್ರದೇಶದ ಕಲಾವಿದರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಗ್ರಾಮದ ಹಿರಿಯ ಸಂಪತ್ ಕುಮಾರ್ ಜೋಯ್ಸ್ ಮಾತನಾಡಿ, ಹೆಚ್ಚೆ ಗ್ರಾಮವೂ ಸೇರಿದಂತೆ ಸೊರಬದ ಅನೇಕ ಹಳ್ಳಿಗಳಲ್ಲಿ ಇಂತಹ ಅಭಿಜಾತ ಕಲೆ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಕಲೆಯನ್ನು ಮುಂಪೀಳಿಗೆಗೆ ಹಸ್ತಾಂತರ ಗೊಳಿಸುವ ಜವಾಬ್ಧಾರಿ ನಮ್ಮೆಲ್ಲರದ್ದು ಎಂದರು.
ಕೃತಿ ರಚಿಸಿರುವ ಗೀತಾಭಟ್ ತಮ್ಮ ಮೂಲೋದ್ಧೇಶ, ಸ್ಥಳೀಯ ಕಲಾರಾಧನೆ, ಅವುಗಳಿಗಿರುವ ಮೌಲ್ಯದ ಕುರಿತು ಮಾತನಾಡಿದರು.
ಗ್ರಾಮದ ರೇವಣಪ್ಪ, ಯಶವಂತ ಮಾಸ್ಟರ್, ಕಜಾಪ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಕಾರ್ಯಕ್ರಮದ ಆಯೋಜಕ ಹಸೆ ಕಲಾವಿದ ವಿಶ್ವನಾಥ್, ಲೇಖಕ ವಿಶ್ವನಾಥ್ ಕುಪ್ಪಗಡ್ಡೆ ಮಾತನಾಡಿದರು.
ಕರ್ನಾಟಕ ಜನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಪ್ರಜ್ವಲ್ ಚಂದ್ರಗುತ್ತಿ ಸ್ಥಳೀಯ ಕಲೆಗಳನ್ನು ಪರಿಚಯಿಸಿದ್ದಕ್ಕೆ ಪರಿಷತ್ ವತಿಯಿಂದ ಗೀತಾಭಟ್ ತಂಡಕ್ಕೆ ಅಭಿನಂದಿಸಿದರು.
ಸ್ಥಳೀಯ ಕಲೆಯ ಪುನರುಜ್ಜೀವನದ ಕೇಂದ್ರದವರು ಹಸೆ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಗ್ರಾಮದ ಮಹಿಳೆಯರಿಂದ ಜನಪದ ಹಾಡುಹಸೆ ಕಾರ್ಯಕ್ರಮವಿತ್ತು.
ಕೇಂದ್ರದ ತಜ್ಞರಾದ ಸ್ಮಿತಾ ತುಮರೂರು, ನಮ್ರತಾ ಕವಲೆ, ಡೊಳ್ಳು ಕಲಾವಿದ ರಾಜ್ಯಪ್ರಶಸ್ತಿ ಪುರಸ್ಕೃತ ಕರಡಿ ಲಕ್ಣ್ಮಣಪ್ಪ, ಹೊಂದಾಸನ ರಾಮಪ್ಪ, ಗ್ರಾಮದ ಅನೇಕ ಹಿರಿಯರು, ಕಲಾವಿದರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















