ಕಲ್ಪ ಮೀಡಿಯಾ ಹೌಸ್ | ಸೊರಬ |
ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲೂಕಿನ ಕಾನಕೇರಿಯಲ್ಲಿ ನಡೆದಿದ್ದು, ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೂಲತಃ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (38) ಆತ್ಮಹತ್ಯೆಗೆ #Suicide ಶರಣಾದ ಮಹಿಳೆ. ಈಕೆಯ ಪತಿ ಪ್ರಭುಮೇಸ್ತ್ರಿ ಎನ್ನುವವರ ವಿರುದ್ಧ ಆರೋಪ ಮಾಡಲಾಗಿದೆ.
Also Read>> ಓಪನ್ ಮೈಂಡ್ಸ್ ಶಾಲೆಯಲ್ಲಿ ಕೆ-12 ಸೂಪರ್ ಇಂಟೆಲಿಜೆನ್ಸ್ ಪಠ್ಯಕ್ರಮ: ಕಿರಣ್‍ಕುಮಾರ್
ಮುಂಜಾನೆ ಸುಮಾರು 12 ಗಂಟೆ ವೇಳೆಗೆ ಪ್ರಕರಣ ಬೆಳಕಿಗೆ ಬಂದಿದ್ದು, ಮಂಜುಳಾ ತಾಯಿ ನೀಡಿರುವ ದೂರಿನ ಅನ್ವಯ ಎಫ್’ಐಆರ್ ದಾಖಲಾಗಿದೆ.
ಏನಿದೆ ಎಫ್’ಐಆರ್’ನಲ್ಲಿ?
2010ರಲ್ಲಿ ಮಂಜುಳಾರನ್ನು ಹಾನಗಲ್ ನಿವಾಸಿಯೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಇಬ್ಬರಲ್ಲೂ ಹೊಂದಾಣಿಕೆಯಿಲ್ಲದ ಕಾರಣ ಪತಿ-ಪತ್ನಿ ಬೇರೆಯಾಗಿದ್ದರು. ನಂತರ 2024ರಲ್ಲಿ ಸೊರಬದ #Soraba ಕಾನಕೇರಿ ನಿವಾಸಿ ಪ್ರಭುಮೇಸ್ತ್ರಿ ಅವರೊಂದಿಗೆ ಮಂಜುಳಾ ವಿವಾಹವಾದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು.
ಪೇಂಟಿಂಗ್ ಅಂಗಡಿ ನಡೆಸುತ್ತಿರುವ ಪ್ರಭುಮೇಸ್ತ್ರಿ ಅಲ್ಲಿಯೇ ಕೆಲಸ ಮಾಡುವ ಮಹಿಳೆಯೊಬ್ಬರ ಜೊತೆಯಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂದು ಆರೋಪಿಸಲಾಗಿದೆ. ಆದರೆ, ಈ ವಿಚಾರ ತಿಳಿದ ಮಂಜುಳಾ ಪತಿಯನ್ನು ಈ ಕುರಿತು ಪ್ರಶ್ನಿಸಿದ್ದ ಕಾರಣ ಆಕೆಗೆ ಪ್ರಭುಮೇಸ್ತ್ರಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದನು ಎಂದು ದೂರಲಾಗಿದೆ.
ನಂತರ ಕುಟುಂಬಸ್ಥರು ಸೇರಿಕೊಂಡು ಎಲ್ಲವನ್ನೂ ಬಿಟ್ಟು ಹೊಂದಾಣಿಕೆಯಿಂದ ಸಂಸಾರ ಮಾಡಿಕೊಂಡು ಹೋಗುವಂತೆ ಬುದ್ದಿ ಹೇಳಿದ್ದರು. ಆದರೂ ಸಹ ಪ್ರಭುಮೇಸ್ತ್ರಿ ಅನೈತಿಕ ಸಂಬಂಧ ಮುಂದುವರೆಸಿದ್ದನು ಎನ್ನಲಾಗಿದೆ.
ಇದರಿಂದ ಕೋಪಗೊಂಡ ಮಂಜುಳಾ ಆ ಮಹಿಳೆಯ ಸಹವಾಸ ನಮಗೆ ಬೇಡ. ಆಕೆಯನ್ನು ಅಂಗಡಿ ಕೆಲಸದಿಂದ ಬಿಡಿಸಿ ಎಂದು ಪಟ್ಟುಹಿಡಿದಿದ್ದಳು. ಆದರೆ, ಆಕೆ ಸುಮಾರು ಜನರಿಗೆ ಸಾಲ ಕೊಟ್ಟಿದ್ದಾಳೆ. ಆ ಹಣವನ್ನು ನೀನು ನಿನ್ನ ತವರುಮನೆಯಿಂದ ತಂದು ಕೊಡುತ್ತೀಯಾ? ನಿನ್ನ ತವರು ಮನೆಯಿಂದ ತಂದುಕೊಟ್ಟರೆ ಕೆಲಸ ಬಿಡಿಸುತ್ತೇನೆ. ಅಲ್ಲದೇ, ನಿನ್ನನ್ನು ಬಿಟ್ಟರೂ ನಾನು ಆಕೆಯನ್ನು ಬಿಡುವುದಿಲ್ಲ. ನೀನು ಇದ್ದರೆಷ್ಟು, ಬಿಟ್ಟರೆಷ್ಟು. ಸತ್ತರೆ ಸಾಯಿ, ನನಗೇನು ನಷ್ಟವಿಲ್ಲ ಎಂದು ಹೇಳಿದ್ದನು ಎಂದು ಆರೋಪಿಸಲಾಗಿದೆ.
ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಮಂಜುಳಾ ಇಂದು ಆಕೆಯ ಮನೆಯ ಶೌಚಾಲಯದ ಮುಂದಿನ ಮರದ ತೊಲೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ವರದಿಯಂತೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಆದರೆ, ಮಂಜುಳಾ ಸಾವಿಗೆ ಆಕೆಯ ಪತಿ ಪ್ರಭುಮೇಸ್ತ್ರಿಯೇ ಕಾರಣವಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಎಫ್’ಐಆರ್ ದಾಖಲಾಗಿದ್ದು, ತನಿಖೆ ನಡೆದಿದೆ.
Also Read>> ನಿರಂತರ ಪ್ರಯತ್ನವೇ ಯಶಸ್ಸಿನ ಸೂತ್ರ: ಡಾ. ಪಿ. ನಾರಾಯಣ
ಪ್ರಭುಮೇಸ್ತ್ರಿ ಹಿನ್ನೆಲೆ
ಇಟ್ಟಿಗೆ ಗುಮ್ಮಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಪ್ರಭು ಮೇಸ್ತ್ರಿ ಕಾಲಕ್ರಮೇಣ ಕಟ್ಟಡ ನಿರ್ಮಾಣ ಗುತ್ತಿಗೆ ಕೆಲಸಕ್ಕೆ ಪ್ರಾರಂಭಿಸಿ ಯಶಸ್ಸನ್ನು ಗಳಿಸಿದ್ದರು. ಇವರ ಜನಪ್ರಿಯತೆ ಮತ್ತು ಕಳೆದ ಬಾರಿಯ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಹನ್ನೆರಡನೇ ವಾರ್ಡ್‌ನಿಂದ ಮೊದಲ ಬಾರಿಗೆ ಬಿಜೆಪಿ ಕಣಕ್ಕೆ ಇಳಿಸಿತ್ತು. ಅದೃಷ್ಟ ವೆಂಬಂತೆ ಮೊದಲ ಬಾರಿಗೆ ಚುನಾಯಿತರಾಗಿ ನಂತರದ ದಿನದಲ್ಲಿ ಮೇಲ್ದರ್ಜೆಗೆ ಏರಿದ ಸೊರಬ ಪುರಸಭೆಯ ಅಧ್ಯಕ್ಷಗಾದಿಯನ್ನು ಅಲಂಕರಿಸಿದ್ದರು. ಬಿಜೆಪಿಯಲ್ಲಿ ಬಣರಾಜಕಾರಣದ ಕಿತ್ತಾಟ ನಡೆಯುತ್ತಿದೆ ಎನ್ನುವ ಹೊತ್ತಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದರು.
ಇವೆಲ್ಲದರ ನಡುವೆ ಹಾರ್ಡ್‌ವೇರ್ ನಡೆಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದೆ. ಈ ಮೊದಲು ಕೇರಳ ಮೂಲದ ಮಹಿಳೆಯೊಂದಿಗೆ ಮೊದಲು ಮದುವೆಯಾಗಿದ್ದರು. ಮೊದಲ ಪತ್ನಿಯನ್ನು ತೊರೆದಿದ್ದ ಪ್ರಭುಮೇಸ್ತ್ರಿ ಜೊತೆಗೆ ಮಂಜುಳಾ ಅವರ ವಿವಾಹವು ಜರುಗಿತ್ತು. ಮೊದಲ ಪತ್ನಿ ತವರಿಗೆ ತೆರಳಿದರೆ, ಎರಡನೇ ಪತ್ನಿ ಬಾರದ ಲೋಕಕ್ಕೆ ತೆರಳಿದ್ದಾಳೆ.
ಅಲ್ಲದೇ, ಮೃತ ಮಂಜುಳಾ ಗರ್ಭಿಣಿಯಾಗಿದ್ದಳು ಎನ್ನಲಾಗುತ್ತಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಸೋಮವಾರ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯ ತರುಯವಾಯವಷ್ಟೇ ಇದೊಂದು ಆತ್ಮಹತ್ಯೆಯೋ ಅಥವಾ ಹತ್ಯೆಯೋ ಎಂಬುದು ತಿಳಿದುಬರದಲಿದೆ.
ಆರೋಪಿ ಪ್ರಭು ಮೇಸ್ತ್ರಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















