ಕಲ್ಪ ಮೀಡಿಯಾ ಹೌಸ್ | ಇಸ್ಲಾಮಾಬಾದ್ |
ಸಿಂಧೂ ಜಲ ಒಪ್ಪಂದದ ವಿವಾದ Indus Water Treaty controversy ತೀವ್ರಗೊಳ್ಳುತ್ತಿರುವ ಹಿನ್ನೆಲೆ, ಭಾರತ ವಿರುದ್ಧ ಪಾಕಿಸ್ತಾನ ಮತ್ತೊಮ್ಮೆ ಯುದ್ಧದ ಬೆದರಿಕೆ ಹಾಕಿದೆ.
ನೀರು ನಮ್ಮ ರಾಷ್ಟ್ರೀಯ ಭದ್ರತೆಯ ಅವಿಭಾಜ್ಯ ಅಂಗವಾಗಿದ್ದು, ಅದರ ಮೇಲೆ ಯಾವುದೇ ರೀತಿಯ ಅಪಾಯ ಎದುರಾದರೆ ಭಾರತ ವಿರುದ್ಧ ಯುದ್ಧಕ್ಕೂ ಹಿಂಜರಿಯುವುದಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ Pakistan’s Defense Minister Khawaja Asif ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿ ARY ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನೀರು ದೇಶದ ಭದ್ರತೆಯ ಪ್ರಮುಖ ಅಂಶವಾಗಿದ್ದು, ಅದರ ಹರಿವಿಗೆ ಧಕ್ಕೆಯಾಗಿದರೆ ಪಾಕಿಸ್ತಾನ ಮೌನವಾಗಿ ಕುಳಿತುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
“ನಮ್ಮ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಬಂದರೆ, ವಿಶೇಷವಾಗಿ ನೀರು ನಮ್ಮ ಭದ್ರತೆಯ ಭಾಗವಾಗಿರುವುದರಿಂದ, ಭಾರತ ವಿರುದ್ಧ ಯುದ್ಧಕ್ಕೂ ಹೋಗುತ್ತೇವೆ” ಎಂದು ಅವರು ಹೇಳಿದರು.
ಇತ್ತೀಚೆಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ನೀಡಿದ ಹೇಳಿಕೆ ಪಾಕಿಸ್ತಾನದಲ್ಲಿ ಆತಂಕವನ್ನು ಹೆಚ್ಚಿಸಿದೆ. 2028ರೊಳಗೆ ಸಿಂಧೂ ನದಿ ವ್ಯವಸ್ಥೆಯ ನೀರಿನ ಹರಿವನ್ನು ಪಾಕಿಸ್ತಾನಕ್ಕೆ ಸಂಪೂರ್ಣವಾಗಿ ನಿಯಂತ್ರಿಸುವ ಸಾಮರ್ಥ್ಯ ಭಾರತಕ್ಕೆ ದೊರೆಯಬಹುದು ಎಂಬ ಅರ್ಥದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಪಾಕಿಸ್ತಾನದ ರಾಜಕೀಯ ಹಾಗೂ ಆಡಳಿತ ವಲಯದಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
2025ರ ಏಪ್ರಿಲ್‌ನಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಗಳ ಮೇಲೆ ಭಾರತ ಆರೋಪ ಹೊರಿಸಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960ರಲ್ಲಿ ಜಾರಿಗೆ ಬಂದಿದ್ದ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತ್ತು.
ಗಡಿ ದಾಟಿ ನಡೆಯುತ್ತಿರುವ ಭಯೋತ್ಪಾದನೆಗೆ ಪಾಕಿಸ್ತಾನ ವಿಶ್ವಾಸಾರ್ಹ ಹಾಗೂ ಶಾಶ್ವತ ಕ್ರಮ ಕೈಗೊಳ್ಳುವವರೆಗೆ ಒಪ್ಪಂದವನ್ನು ಮರುಜಾರಿಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಸಿಂಧೂ ಜಲ ಒಪ್ಪಂದವು ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಮುಖ ಜಲ ಹಂಚಿಕೆ ಒಪ್ಪಂದವಾಗಿದ್ದು, ಇದರಡಿ ಸಿಂಧೂ ನದಿ ವ್ಯವಸ್ಥೆಯ ಬಹುಪಾಲು ನೀರಿನ ಬಳಕೆಯ ಹಕ್ಕು ಪಾಕಿಸ್ತಾನಕ್ಕೆ ನೀಡಲಾಗಿದೆ. ಪಾಕಿಸ್ತಾನದ ಕೃಷಿ, ನೀರಾವರಿ, ಕುಡಿಯುವ ನೀರಿನ ಪೂರೈಕೆ ಮತ್ತು ಆರ್ಥಿಕ ವ್ಯವಸ್ಥೆ ಈ ನದಿಗಳ ಮೇಲೆ ಅವಲಂಬಿತವಾಗಿರುವುದರಿಂದ, ನೀರಿನ ಹರಿವಿನಲ್ಲಿ ವ್ಯತ್ಯಯ ಉಂಟಾದರೆ ದೇಶದ ಆಹಾರ ಭದ್ರತೆ ಮತ್ತು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















