ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು, ಗೋವರ್ಧನ್ ಟ್ರಸ್ಟ್, ಮಾರಿಕಾಂಬ ಫೈನಾನ್ಸ್, ಶ್ರೀಗಂಧ, ಶಿವಸಂಕಲ್ಪ, ಕರವೇ ಸಿಂಹಸೇನೆ ಇನ್ನಿತರೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ, ಕಾರ್ಗಲ್ ಚಲೋ ಕಾರ್ಯಕ್ರಮವನ್ನು ಜೂನ್ 28ರಂದು ಭಾನುವಾರ ಫ್ರೀಡಂಪಾರ್ಕ್(ಅಲ್ಲಮ ಪ್ರಭು) ಮೈದಾನದಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಪ್ರಮುಖರಾದ ಬಿ.ಎಂ. ಕುಮಾರಸ್ವಾಮಿ ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಶ್ಚಿಮಘಟ್ಟ ಪ್ರದೇಶದಲ್ಲಿ ತಜ್ಞರ ವರದಿಯನ್ನು ಲೆಕ್ಕಿಸದೆ ವನ್ಯಜೀವಿ ಮತ್ತು ಪರಿಸರ ಕಾನೂನುಗಳನ್ನು ಬದಿಗೊತ್ತಿ ರಾಜ್ಯ ಸರ್ಕಾರದ ಒತ್ತಡ ಇದೆ ಎಂಬ ಕಾರಣ ಮುಂದೂಡಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಮುಂದಾಗಿದೆ ಎಂಬ ಅನುಮಾನ ಕಾಡುತ್ತಿದೆ. ಕೇಂದ್ರದ ಅನುಮತಿ ಬರುವ ಮುಂಚೆಯೇ ಇಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. 3500 ಕೋಟಿ ರೂ.ಯೋಜನೆ ಈಗ 10,500 ಕೋಟಿಗೆ ಏರಿದ್ದು ಬಜೆಟ್‍ನಲ್ಲೂ ಹಣ ಕಾಯ್ದಿರಿಸಲಾಗಿದೆ. ಇದನ್ನು ವಿರೋಧಿಸಿ ಶರಾವತಿ ಪಿಎಸ್‍ಪಿ ವಿರುದ್ಧ ಬೃಹತ್ ಜನಾಂದೋಲನವನ್ನು ಹಮ್ಮಿಕೊಂಡಿದ್ದು ಇದರ ಭಾಗವಾಗಿ ಭಾನುವಾರ ಬೆಳಿಗ್ಗೆ ಫ್ರೀಡಂಪಾರ್ಕ್‍ನಿಂದ ಸುಮಾರು 7 ಗಂಟೆಗೆ 108 ಬಸ್ಸುಗಳ ಮೂಲಕ 5000 ಸಾವಿರಕ್ಕೂ ಹೆಚ್ಚು ಪರಿಸರ ಹೋರಾಟಗಾರರು ಶಿವಮೊಗ್ಗದಿಂದ ಕಾರ್ಗಲ್ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಪೂಜ್ಯರಾದ ಆದಿಚುಂಚನಗಿರಿ ಶಾಖಾ ಮಠದ ನಾದಮಯಾನಂದನಾಥ ಶ್ರೀಗಳು ಮತ್ತು ಬಿಳಿಕೆ ಮಠದ ಶ್ರೀಗಳು, ರಾಚೋಟೇಶ್ವರಿ ಶ್ರೀಗಳು, ತ್ಯಾವರೆಕೆರೆ ಮಠದ ಅಭಿನವ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ. ಶಿವಮೊಗ್ಗ ಬೆಳಿಗ್ಗೆ 7ಗಂಟೆಗೆ ಹೊರಟು 10-30ಕ್ಕೆ ಸಾಗರ ಗಾಂಧಿವೃತ್ತದಲ್ಲಿ ಎಲ್ಲಾ ಹೋರಾಟಗಾರರು ಸಮ್ಮಿಲನಗೊಂಡು ಅಲ್ಲಿ ಬೃಹತ್ ಸಭೆ ಜರುಗಲಿದೆ. ಈ ಸಭೆಯನ್ನುದ್ದೇಶಿಸಿ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿಯವರು ಭಾಷಣ ಮಾಡಲಿದ್ದಾರೆ. ಸಾಗರ ನಗರದ ಹಲವಾರು ಪರಿಸರ ಸಂಘಟನೆಗಳು ಮತ್ತು ರೈತಪರ ಸಂಘಟನೆಗಳು ಹಾಗೂ ಈ ಯೋಜನೆಯಿಂದ ಸಂತ್ರಸ್ತರು ಈ ಹೋರಾಟಕ್ಕೆ ಕೈಜೋಡಿಸಲಿದ್ದಾರೆ. ಮಧ್ಯಾಹ್ನ ಸಿಂಗಧೂರು ದೇವಿಯ ದರ್ಶನ ಪಡೆದು ಅಲ್ಲಿ ಪ್ರಸಾದ ಭೋಜನ ಸ್ವೀಕರಿಸಿ, ಸಂಜೆ 4 ಗಂಟೆಗೆ ಕಾರ್ಗಲ್ ತಲುಪಿ ಬೃಹತ್ ಸಭೆ ಆಯೋಜಿಸಲಾಗಿದೆ.
Also read: Power Shock | ಪತ್ರೊಡೆ ಎಲೆ ಕೀಳುವ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು
ಸಭೆಯ ನಂತರ ಕೆಪಿಸಿ ಅಧಿಕಾರಿಗಳಿಗೆ ಶರಾವತಿ ಪಿಎಸ್‍ಪಿ ವಿರುದ್ಧ ಮನವಿ ಸಲ್ಲಿಸಲಾಗುವುದು. ನಂತರ ಸಾಗರದ ಮೂಲಕ ವರದಹಳ್ಳಿಯ ಶ್ರೀಧರಾಶ್ರಮ ತಲುಪಿ ಅಲ್ಲಿ ರಾತ್ರಿ ಭೋಜನ ಮುಗಿಸಿ ಶಿವಮೊಗ್ಗಕ್ಕೆ ಹಿಂತಿರುಗುವ ಕಾರ್ಯಕ್ರಮವಿದ್ದು, ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಅವರು ಕೋರಿದ್ದಾರೆ.
ರಾಷ್ಟ್ರಭಕ್ತರ ಬಳಗದ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇತ್ತೀಚೆಗೆ ಸಂಸದ ಕಾಗೇರಿಯವರು ಬೆಳಗಾವಿಯಲ್ಲಿ ನನಗೆ ಮುಖಾಮುಖಿಯಾದಾಗ ಕೇಂದ್ರದ ಪರಿಸರ ಸಚಿವರಾದ ಭೂಪೇಂದ್ರ ಯಾದವ್ ಅವರು ಈ ಯೋಜನೆಗೆ ಕೇಂದ್ರದ ಒಪ್ಪಿಗೆ ನೀಡಿಲ್ಲ. ರಾಜ್ಯಸರ್ಕಾರ ಕೇಂದ್ರದ ಮೇಲೆ ಒತ್ತಡತಂತ್ರ ಹೇರುತ್ತಿದೆ. ಕೇಂದ್ರ ವಿವಿಧ ಪರಿಸರ ವಿಭಾಗಗಳು ಇನ್ನೂ ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಹೇಳಿದ್ದಾರೆ. ಆದರೂ ಕೂಡ ರಾಜ್ಯ ಸರ್ಕಾರ ವಿಶೇಷ ಆಸಕ್ತಿವಹಿಸಿ ಅದರಲ್ಲೂ ಇಂಧನ ಸಚಿವ ಕೆ.ಜೆ. ಜಾರ್ಜ್‍ರವರು ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿದ್ದಾರೆ. 3500 ಕೋಟಿ ವೆಚ್ಚದ ಈ ಯೋಜನೆಗೆ 10500 ಕೋಟಿ ರೂ.ಗಳಿಗೆ ಯೋಜನಾವೆಚ್ಚ ಏರಿಸಲಾಗಿದೆ. ಪರಿಸರ ವಾದಿಗಳು ನೀಡಿದ ಪರ್ಯಾಯ ಮಾರ್ಗಗಳನ್ನು ನಿರ್ಲಕ್ಷಿಸಲಾಗಿದೆ. ಸಚಿವ ಜಾರ್ಜ್ ಅವರು ಏಕೆ ಈ ಯೋಜನೆಯ ಬಗ್ಗೆ ಹಠಮಾರಿ ಧೋರಣೆ ತಳೆದಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಪಶ್ಚಿಮಘಟ್ಟ ನಾಶಕ್ಕೆ ಹೊರಟಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಕೆ.ಈ. ಕಾಂತೇಶ್, ಉಮೇಶ್ ಆರಾಧ್ಯ, ಶ್ರೀಕಾಂತ್, ಅಶೋಕ್‍ಕುಮಾರ್, ಗಾಂಧಿಬಸಪ್ಪ, ಜನಾರ್ಧನ್ ಪೈ, ಮಧುಸೂದನ್ ಐತಾಳ್, ಮೋಹನ್, ನವೀನ್‍ಕುಮಾರ್, ಬಿ.ಗಣೇಶ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








