ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಒಂದು ದೇಶದ ಸಂಪತ್ತು ಅಲ್ಲಿನ ಯುವ ಸಮೂಹವನ್ನು ಅವಲಂಬಿಸಿದೆ. ಯುವಶಕ್ತಿಯೇ ಎಂತಹ ಕಷ್ಟಕರ ಸನ್ನಿವೇಶವನ್ನೂ ಎದುರಿಸುವ ಸಂಘಟನೆಯಾಗಿ ಪರಿವರ್ತನೆ ಆಗುತ್ತದೆ ಎಂದು ನಿವೃತ್ತ ಕರ್ನಲ್ ರಾಮಚಂದ್ರ ತಿಳಿಸಿದರು.
ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ 2026-27ನೇ ಸಾಲಿನ “ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ” ಮಂಗಳವಾರ ಶಾಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ನಿಜವಾದ ನಾಯಕ, ನಾಯಕತ್ವದ ಗುಣ ಮೈಗೂಡುವುದು ಶಾಲೆಯಲ್ಲಿ. ಹಾಗಾಗಿ ಕೇವಲ ಅಂಕ ಗಳಿಸುವುದೇ ಮುಖ್ಯ ಅಲ್ಲ, ಬದಲಾಗಿ ದೇಶ ಕಟ್ಟುವ, ದೇಶ ಸೇವೆ ಮಾಡುವ ಉತ್ತಮ ಪ್ರಜೆಯಾಗಿ ಬೆಳೆಯಬೇಕು. ಅದಕ್ಕೆ ಶಾಲೆ ಒಂದು ಅಡಿಪಾಯ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಡಾ. ಶಿವಕುಮಾರ್ ಜಿ ಎಸ್ ಹಿತನುಡಿಗಳನ್ನಾಡಿ, “ಸಂಘಟನೆ, ಸಂಘದ ನಾಯಕತ್ವ, ಸಮಯೋಚಿತ ಗುಣಗಳ ಬೆಳವಣಿಗೆಗೆ ಶಾಲಾ ಚಟುವಟಿಕೆಗಳು, ಪ್ರಜಾಪ್ರಭುತ್ವ ಮಾದರಿ ವ್ಯವಸ್ಥೆಯ ವಿವಿಧ ಚಟುವಟಿಕೆಗಳು ಅಗತ್ಯ. ಅಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಭವಿಷ್ಯದ ನಾಯಕರಾಗಿ ಬೆಳೆಯಬೇಕು” ಎಂದು ಶುಭ ಹಾರೈಸಿದರು.
Also read: ಶಿಕ್ಷಕರು ಕ್ರೀಯಾಶೀಲರಾದಾಗ ಮಾತ್ರ ಪರಿಣಾಮಕಾರಿ ಶಿಕ್ಷಣ ಸಾಧ್ಯ: ಎನ್‌ಇಎಸ್ ಅಧ್ಯಕ್ಷ ನಾರಾಯಣ ರಾವ್
ಆಡಳಿತ ಮಂಡಳಿ ಸಂಯೋಜನಾಧಿಕಾರಿ ಕುಬೇರಪ್ಪ ಕೆ ಮಾತನಾಡಿ, “ಒಳ್ಳೆಯ ಸಂಸ್ಕಾರ ದೊರೆತ ಮಗು ದೇಶದ ಉತ್ತಮ ನಾಯಕನಾಗಬಲ್ಲದು, ಹಾಗೆಯೇ ದೇಶದ ಆಸ್ತಿಯೂ ಕೂಡ. ಅಂತಹ ಬೆಲೆಯುಳ್ಳ ಪೋಷಕರ, ಗುರುಗಳ, ಸಮಾಜದ ಮಕ್ಕಳಾಗಿ” ಎಂದು ಹಿತವಚನ ನೀಡಿದರು.
ಶಾಲೆಯ ಪ್ರಾಚಾರ್ಯರಾದ ಪ್ರಶಾಂತ್ ಎಚ್ ಡಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ, ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.
ಸಹಶಿಕ್ಷಕ ಜಿಯಾವುಲ್ಲಾ ಚುನಾಯಿತ ಪ್ರತಿನಿಧಿಗಳನ್ನು ವೇದಿಕೆಗೆ ಆಹ್ವಾನಿಸಿ, ಗಣ್ಯರಿಂದ ಧ್ವಜ ಹಸ್ತಾಂತರ ಮಾಡಿಸಿ, ಕರ್ತವ್ಯ ಹಾಗೂ ನೀತಿ ಸಂಹಿತೆ ತಿಳಿಸಿದರು. ಸಹಶಿಕ್ಷಕಿ ಶ್ರೀಮತಿ ಭಾಗ್ಯಲಕ್ಷ್ಮೀ ಚುನಾಯಿತ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ವೇದಿಕೆಯಲ್ಲಿ ಕೋ-ಆರ್ಡಿನೇಟರ್ ಶ್ರೀ ಪ್ರಭು, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ವಿವಿಧ ವಿಭಾಗಗಳ ಕೋ-ಆರ್ಡಿನೇಟರ್ಸ್, ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ವರ್ಗದವರು ಹಾಜರಿದ್ದರು.
ಕಾರ್ಯಕ್ರಮವನ್ನು ಕನಸು ಮತ್ತು ಸಂಗಡಿಗರು ಪ್ರಾರ್ಥನೆ ಹಾಡುವ ಮೂಲಕ ಪ್ರಾರಂಭಿಸಿದರು. ಸಹಶಿಕ್ಷಕರಾದ ಶ್ರೀ ಚನ್ನೇಶ್ ವಂದಿಸಿ, ಸಹಶಿಕ್ಷಕಿಯರಾದ ಶ್ರೀಮತಿ ಕಾವ್ಯ ಪಾಟೀಲ್ ಸ್ವಾಗತಿಸಿ, ಶ್ರೀಮತಿ ಶಿಲ್ಪಾ ನಿರೂಪಿಸಿದರು.
ನೂತನ ವಿದ್ಯಾರ್ಥಿ ಸಂಘದ ಮುಖ್ಯಸ್ಥರು, ಸದನ ನಾಯಕರು, ಉಪನಾಯಕರು, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಗಳು ಮುಖ್ಯ ಅತಿಥಿಗಳಿಂದ ಬ್ಯಾಡ್ಜ್ ಹಾಗೂ ಸ್ಯಾಶ್ ಸ್ವೀಕರಿಸಿ, ಶಾಲೆಯ ಧ್ಯೇಯೋದ್ದೇಶಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








