ಕಲ್ಪ ಮೀಡಿಯಾ ಹೌಸ್ | ಸಾಗರ |
ತಾಲ್ಲೂಕಿನ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಗ್ರಿಡ್ ಕಾಮಗಾರಿ ತಕ್ಷಣ ಮುಗಿಸುವಂತೆ ಒತ್ತಾಯಿಸಿ ಗುರುವಾರ ವಿದ್ಯುತ್ ಗ್ರಿಡ್ ಹೋರಾಟ ಸಮಿತಿ ವತಿಯಿಂದ ಕರೆ ಕೊಡಲಾಗಿದ್ದ ತ್ಯಾಗರ್ತಿ ಬಂದ್ ಯಶಸ್ವಿಯಾಗಿದೆ. ಬಂದ್ ಹಿನ್ನೆಲೆಯಲ್ಲಿ ಗ್ರಾಮದ ಯಾವುದೇ ಅಂಗಡಿ ಮುಂಗಟ್ಟುಗಳು ಬಾಗಿಲು ತೆಗೆಯದೆ ಬಂದ್‌ಗೆ ಸಹಕಾರ ನೀಡಿದರು. ಸುರಿವ ಮಳೆಯ ನಡುವೆಯೂ ಸಮಿತಿಯು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸೋಮಶೇಖರ ಲ್ಯಾವಿಗೆರೆ, ಕಾಮಗಾರಿ ಪ್ರಾರಂಭವಾಗಿ ನಾಲ್ಕೈದು ವರ್ಷ ಕಳೆದಿದ್ದರೂ ಬೇರೆಬೇರೆ ಕಾರಣಗಳಿಂದ ಅದನ್ನು ವಿಳಂಬ ಮಾಡಲಾಗುತ್ತಿದೆ. ಈಚೆಗೆ ಶಾಸಕರ ಎದುರಿನಲ್ಲಿ ಮೂರು ತಿಂಗಳಿನೊಳಗೆ ಕಾಮಗಾರಿ ಮುಗಿಸುತ್ತೇವೆ ಎಂದು ಅಧಿಕಾರಿಗಳು ನೀಡಿದ ಭರವಸೆ ಹುಸಿಯಾಗಿದೆ. ಶಾಸಕರು, ಸಂಸದರ ಮಾತಿಗೆ ಅಧಿಕಾರಿಗಳು ಮಂಕುಬೂದಿ ಎರಚುತ್ತಿದ್ದಾರೆ. ರೈತರು ಬೀದಿಗೆ ಇಳಿಯುವ ಕೆಲಸವನ್ನು ಮಾಡುತ್ತಿದ್ದೀರಿ. ತಕ್ಷಣ ವಿದ್ಯುತ್ ಗ್ರಿಡ್ ಕಾಮಗಾರಿ ಮುಗಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಮಾತನಾಡಿ, ತ್ಯಾಗದ ಮೂಲಕ ನಾಡಿಗೆ ವಿದ್ಯುತ್ ನೀಡಿದ ಹೆಗ್ಗಳಿಕೆ ನಮ್ಮ ತಾಲ್ಲೂಕಿನದ್ದು. ಉಳ್ಳೂರು-ತ್ಯಾಗರ್ತಿ ವಿದ್ಯುತ್ ಗ್ರಿಡ್ ಕಾಮಗಾರಿ ಇಷ್ಟೊಂದು ವಿಳಂಬವಾಗಲು ಕಾರಣ ಏನು ಎನ್ನುವುದನ್ನು ಸ್ಪಷ್ಟಪಡಿಸಿ. ಕಳೆದ ಸರ್ಕಾರದ ಅವಧಿಯಲ್ಲಿ ಶಂಕುಸ್ಥಾಪನೆಯಾದ ಕಾಮಗಾರಿ ಹಣ ಇದ್ದರೂ ಏಕೆ ಪೂರ್ಣಗೊಂಡಿಲ್ಲ ಎಂದರೇ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು, ೨೦೧೬ರಲ್ಲಿ ಕಾಗೋಡು ತಿಮ್ಮಪ್ಪನವರು ವಿದ್ಯುತ್ ಗ್ರಿಡ್‌ಗೆ ಯೋಜನೆ ರೂಪಿಸಿದ್ದರು. ಯೋಜನೆ ರೂಪಿಸುವಾಗ ಸಣ್ಣಪುಟ್ಟ ಕಾನೂನು ತೊಡಕು ಬರುತ್ತದೆ. ವಿರೋಧ ವ್ಯಕ್ತಪಡಿಸಿದವರ ಮನವೊಲಿಸಿ ಕಾಮಗಾರಿ ಮುಗಿಸುವತ್ತ ಅಧಿಕಾರಿಗಳು ಗಮನ ಹರಿಸಬೇಕಾಗಿತ್ತು. ರೈತರಿಗೆ ತೊಂದರೆ ಆಗದಂತೆ ತಕ್ಷಣ ಕಾಮಗಾರಿ ಮುಗಿಸಿ ಎಂದರು.
Also read: ಚಾಕು ತೋರಿಸಿ ದರೋಡೆ, ಯುವಕನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ
ಹೋರಾಟ ಸಮಿತಿಯ ಕುಮಾರಸ್ವಾಮಿ ಕೊಪ್ಪ, ಕಾಮಗಾರಿ ಪೂರ್ಣಗೊಳಿಸಲು ಗ್ರಾಮಸ್ಥರು ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಗ್ರಾಮಸ್ಥರು ಭರವಸೆ ನೀಡಿದ್ದರೂ ಇಚ್ಚಾಸಕ್ತಿಯನ್ನು ಗುತ್ತಿಗೆದಾರರು ಪ್ರದರ್ಶನ ಮಾಡುತ್ತಿಲ್ಲ. ರೈತರು ಬೀದಿಗಿಳಿದು ಗ್ರಿಡ್ ಕಾಮಗಾರಿ ಮುಗಿಸಿ ಎಂದು ಬೇಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದರೇ, ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಗ್ರಿಡ್ ನಿರ್ಮಾಣಕ್ಕೆ ಬೇಕಾದ ಸಹಕಾರ ನೀಡಲು ರೈತ ಸಂಘ ಎಲ್ಲ ರೀತಿಯ ಬೆಂಬಲ ಗುತ್ತಿಗೆದಾರರಿಗೆ ನೀಡುವ ಭರವಸೆ ನೀಡಿತ್ತು. ಗುತ್ತಿಗೆದಾರರು ರೈತ ಸಂಘ ಸ್ಥಳಕ್ಕೆ ಭೇಟಿ ನೀಡಿದಾಗ ಗುತ್ತಿಗೆದಾರ ಎಂಟು ದಿನದೊಳಗೆ ಕಾಮಗಾರಿ ಪ್ರಾರಂಭಿಸುವ ಭರವಸೆ ನೀಡಿದ್ದರು. ಆದರೆ ಎಲ್ಲವೂ ಸುಳ್ಳು ಭರವಸೆ ನೀಡಿದ್ದನ್ನು ರೈತ ಸಂಘ ಖಂಡಿಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆ ಉದ್ದೇಶಿಸಿ ಪ್ರಶಾಂತ್ ಕೆ.ಎಸ್., ಮಹಾಬಲೇಶ್ವರ ಗೌಡ ಮಾತನಾಡಿದರು. ಪ್ರತಿಭಟನೆಯಲ್ಲಿ ಟಿ.ಕೆ.ಹನುಮಂತಪ್ಪ, ಶ್ರೀನಾಥ್ ನಾಡಿಗ್, ಕೃಷ್ಣಮೂರ್ತಿ ಹೊಸಂತೆ, ಚೇತನರಾಜ್ ಕಣ್ಣೂರು, ಅಮೃತ್‌ರಾಜ್, ವಿರೇಶ್ ಬರೂರು, ಹಮೀದ್ ಖಾನ್, ಶಿವು ತ್ಯಾಗರ್ತಿ, ವೀರಪ್ಪ ಲ್ಯಾವಿಗೆರೆ, ಸುಭಾಷ್ ಕಲ್ಲನ್, ಖಂಡೋಜಪ್ಪ ಇನ್ನಿತರರು ಹಾಜರಿದ್ದರು.
ಅಧಿಕಾರಿಗಳಿಗೆ ದಿಗ್ಭಂದನ : ಮನವಿ ಸ್ವೀಕರಿಸಲು ಬಂದ ಮೆಸ್ಕಾಂ ಅಧಿಕಾರಿ ಹಾಗೂ ಉಪ ತಹಶೀಲ್ದಾರ್ ಅವರನ್ನು ಪ್ರತಿಭಟನಾರಾರರು ದಿಗ್ಬಂಧನ ಹಾಕಿ ಬೇಡಿಕೆ ಈಡೇರಿಸಿ ಹೋಗಿ ಎಂದು ಪಟ್ಟು ಹಿಡಿಯುವ ಜೊತೆಗೆ ಮನವಿ ಸ್ವೀಕರಿಸಲು ಉಪ ವಿಭಾಗಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ನಂತರ ಮೆಸ್ಕಾಂ ಕಚೇರಿ ಆವರಣದಲ್ಲಿ ರೈತರು ಅಡುಗೆ ಬೇಯಿಸಿ ಊಟ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








