ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಮ್ಮ ಬಹುನಿರೀಕ್ಷಿತ ಪೌರಾಣಿಕ ಆಕ್ಷನ್ ಮಹಾಕಾವ್ಯ ‘ದಿ ಒಡಿಸ್ಸಿ’ಯ (The Odyssey Premiere) ಜಾಗತಿಕ ಬಿಡುಗಡೆಯ ಸಂಭ್ರಮಾಚರಣೆಗಾಗಿ, ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ಮಾಪಕ ಕ್ರಿಸ್ಟೋಫರ್ ನೋಲನ್ ಅವರು ಜುಲೈ 10ರಂದು ಮುಂಬೈಗೆ ಆಗಮಿಸಿದ್ದರು.
ಇವರೊಂದಿಗೆ ಅಕಾಡೆಮಿ ಪ್ರಶಸ್ತಿ ವಿಜೇತ ನಟ ಮ್ಯಾಟ್ ಡಾಮನ್, ಬಾಫ್ಟಾ ವಿಜೇತ ನಟ ಟಾಮ್ ಹಾಲೆಂಡ್ ಹಾಗೂ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ಮಾಪಕಿ ಎಮ್ಮಾ ಥಾಮಸ್ ಅವರು ಸಾಥ್ ನೀಡಿದರು.
ಭಾರತದಲ್ಲಿ ಕ್ರಿಸ್ಟೋಫರ್ ನೋಲನ್ ಅವರ ಚಲನಚಿತ್ರವೊಂದರ ಪ್ರೀಮಿಯರ್ ಪ್ರದರ್ಶನ ನಡೆಯುತ್ತಿರುವುದು ಇದೇ ಮೊದಲು.
‘ದಿ ಒಡಿಸ್ಸಿ’ಯ ಜಾಗತಿಕ ಪ್ರಚಾರ ಪ್ರವಾಸದ ಪ್ರಮುಖ ತಾಣಗಳಲ್ಲಿ ಒಂದಾಗಿ ಮುಂಬೈ ನಗರವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಸಂಪೂರ್ಣವಾಗಿ IMAX®️ ಫಿಲ್ಮ್ ಕ್ಯಾಮೆರಾಗಳಲ್ಲೇ ಚಿತ್ರೀಕರಣಗೊಂಡ ವಿಶ್ವದ ಮೊದಲ ಚಲನಚಿತ್ರ ಎಂಬ ಹೆಗ್ಗಳಿಕೆಗೆ ‘ದಿ ಒಡಿಸ್ಸಿ’ ಪಾತ್ರವಾಗಿದೆ. ಈ ಚಿತ್ರವು ಜುಲೈ 17ರಂದು ಜಾಗತಿಕವಾಗಿ ತೆರೆಕಾಣಲಿದೆ.
Also Read>> Indian Railway | ವಿಶಾಖಪಟ್ಟಣಂ–ಬೆಂಗಳೂರು ವಿಶೇಷ ರೈಲು ಸೇವೆ ವಿಸ್ತರಣೆ
ಮುಂಬೈನ ಫೀನಿಕ್ಸ್ ಪ್ಯಾಲೇಡಿಯಂನಲ್ಲಿರುವ PVR ICON IMAX®️ ಚಿತ್ರಮಂದಿರದಲ್ಲಿ ನಡೆದ ವಿಶೇಷ ಅಭಿಮಾನಿಗಳ ಪ್ರದರ್ಶನದೊಂದಿಗೆ ಭಾರತದಲ್ಲಿನ ಈ ಸಂಭ್ರಮಾಚರಣೆಗೆ ಚಾಲನೆ ದೊರೆಯಿತು.
ಈ ಕಾರ್ಯಕ್ರಮದಲ್ಲಿ ಕ್ರಿಸ್ಟೋಫರ್ ನೋಲನ್ ಹಾಗೂ ಚಿತ್ರತಂಡದವರು ದಿಢೀರನೆ ಪ್ರತ್ಯಕ್ಷರಾಗಿ ಪ್ರೇಕ್ಷಕರಿಗೆ ಅಚ್ಚರಿಯನ್ನು ನೀಡಿದರು. ‘ದಿ ಒಡಿಸ್ಸಿ’ ಜಾಗತಿಕ ಪ್ರಚಾರ ಪ್ರವಾಸದ ಭಾಗವಾಗಿ, ಚಿತ್ರತಂಡವು ಅಭಿಮಾನಿಗಳನ್ನು ನೇರವಾಗಿ ಭೇಟಿಯಾದ ಏಕೈಕ ಪ್ರದರ್ಶನ ಇದಾಗಿದೆ.
ಕ್ರಿಸ್ಟೋಫರ್ ನೋಲನ್, ಮ್ಯಾಟ್ ಡಾಮನ್, ಟಾಮ್ ಹಾಲೆಂಡ್ ಮತ್ತು ಎಮ್ಮಾ ಥಾಮಸ್ ಅವರು ಮಾಧ್ಯಮದವರೊಂದಿಗೆ ಸಂವಾದ ನಡೆಸಿದರು. ಈ ವೇಳೆ, ‘ದಿ ಒಡಿಸ್ಸಿ’ ಚಿತ್ರದ ನಿರ್ಮಾಣ ಹಾಗೂ ಜಾಗತಿಕ ಪ್ರವಾಸದ ಭಾಗವಾಗಿ ಭಾರತಕ್ಕೆ ಭೇಟಿ ನೀಡಿದ ತಮ್ಮ ವಿಶೇಷ ಅನುಭವಗಳನ್ನು ಅವರು ಹಂಚಿಕೊಂಡರು.
ವಿಶೇಷ ‘ರೆಡ್-ಕಾರ್ಪೆಟ್ ಪ್ರೀಮಿಯರ್’ ಕಾರ್ಯಕ್ರಮದೊಂದಿಗೆ ಚಿತ್ರತಂಡದ ಭಾರತ ಭೇಟಿಯು ಮುಕ್ತಾಯಗೊಂಡಿದೆ. ಈ ಭವ್ಯ ಸಮಾರಂಭದಲ್ಲಿ ಚಿತ್ರತಂಡವು ಭಾರತೀಯ ಚಲನಚಿತ್ರ ರಂಗದ ಗಣ್ಯರೊಂದಿಗೆ ಪಾಲ್ಗೊಂಡು, ಈ ವರ್ಷದ ಅತಿದೊಡ್ಡ ಸಿನಿಮಾ ಸಂಭ್ರಮಕ್ಕೆ ಸಾಕ್ಷಿಯಾದರು.
ಈ ಚಿತ್ರದಲ್ಲಿ ಮ್ಯಾಟ್ ಡಾಮನ್, ಟಾಮ್ ಹಾಲೆಂಡ್, ಅಕಾಡೆಮಿ ಪ್ರಶಸ್ತಿ ವಿಜೇತೆ ಅನ್ನಿ ಹ್ಯಾಥ್‌ವೇ, ರಾಬರ್ಟ್ ಪ್ಯಾಟಿನ್ಸನ್, ಅಕಾಡೆಮಿ ಪ್ರಶಸ್ತಿ ವಿಜೇತೆ ಲುಪಿಟಾ ನೈಯೊಂಗೊ, ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶಿತ ಸಮಂತಾ ಮಾರ್ಟನ್, ಎಮ್ಮಿ ಮತ್ತು ಗೋಲ್ಡನ್ ಗ್ಲೋಬ್ ವಿಜೇತೆ ಜೆಂಡಾಯಾ ಹಾಗೂ ಅಕಾಡೆಮಿ ಪ್ರಶಸ್ತಿ ವಿಜೇತೆ ಚಾರ್ಲೈಜ್ ಥೆರಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿಂಕೋಪಿ ಬ್ಯಾನರಲ್ಲಿ The Odyssey
ಹೋಮರ್ ಅವರ ಮೂಲ ಕಥಾಹಂದರವನ್ನು ಆಧರಿಸಿರುವ ‘ದಿ ಒಡಿಸ್ಸಿ’ ಚಿತ್ರವನ್ನು ಯೂನಿವರ್ಸಲ್ ಪಿಕ್ಚರ್ಸ್ ಬಿಡುಗಡೆ ಮಾಡುತ್ತಿದೆ. ಕ್ರಿಸ್ಟೋಫರ್ ನೋಲನ್ ನಿರ್ದೇಶಿಸಿರುವ ಈ ಚಿತ್ರವನ್ನು ಎಮ್ಮಾ ಥಾಮಸ್ ಮತ್ತು ನೋಲನ್ ಅವರು ‘ಸಿಂಕೋಪಿ’ (Syncopy) ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.
ಭಾರತದಲ್ಲಿ ನಡೆದ ಈ ಚಿತ್ರದ ಪ್ರೀಮಿಯರ್ ಸಮಾರಂಭವು, ದೇಶ ಕಂಡ ಅತ್ಯಂತ ಮಹತ್ವದ ಹಾಲಿವುಡ್ ಚಲನಚಿತ್ರ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇದು ಚಲನಚಿತ್ರ ನಿರ್ಮಾಪಕರು, ಅಭಿಮಾನಿಗಳು ಮತ್ತು ಭಾರತೀಯ ಚಲನಚಿತ್ರ ರಂಗವನ್ನು ಒಗ್ಗೂಡಿಸಿ, ಚಿತ್ರಮಂದಿರದ ಅನುಭವವನ್ನು ಸಂಭ್ರಮಿಸುವ ವೇದಿಕೆಯಾಗಿದೆ.
ಯೂನಿವರ್ಸಲ್ ಪಿಕ್ಚರ್ಸ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡೆನ್ಜಿಲ್ ಡಯಾಸ್ ಮಾತನಾಡಿ, “ಭಾರತದ ಪ್ರೇಕ್ಷಕರಿಗೆ ಕ್ರಿಸ್ಟೋಫರ್ ನೋಲನ್ ಅವರ ಸಿನಿಮಾಗಳೆಂದರೆ ಸದಾ ವಿಶೇಷ ಒಲವು.
‘ದಿ ಒಡಿಸ್ಸಿ’ ಸಿನಿಮದ ಜಾಗತಿಕ ಪ್ರಚಾರ ಪ್ರವಾಸದ ಭಾಗವಾಗಿ ಮುಂಬೈಗೆ ಬಂದಿರುವುದು, ಪ್ರೇಕ್ಷಕರಿಗೆ ಅತ್ಯುತ್ತಮ ಚಿತ್ರಮಂದಿರದ ಅನುಭವವನ್ನು ನೀಡುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಅಲ್ಲದೆ, ಭಾರತವು ನಮಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದ್ದು, ಇಲ್ಲಿನ ನಮ್ಮ IMAX®️ ಪಾಲುದಾರರೊಂದಿಗೆ ಈ ಸಿನಿಮಾವನ್ನು ಸಂಭ್ರಮಿಸುತ್ತಿರುವುದು ನಮಗೆ ಸಂತಸ ನೀಡಿದೆ,’ ಎಂದರು.
‘ದಿ ಒಡಿಸ್ಸಿ’ ಚಿತ್ರದ IMAX®️ ಟಿಕೆಟ್‌ಗಳ ಅಡ್ವಾನ್ಸ್ ಬುಕಿಂಗ್ ಇದೀಗ ಭಾರತದಾದ್ಯಂತ ಆರಂಭವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









