ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೂಪವು ಕಣ್ಣುಗಳಿಗೆ ಮಾತ್ರ ಸೀಮಿತವಾದರೆ, ಗುಣವು ಆತ್ಮವನ್ನು ಸ್ಪರ್ಶಿಸಿ ಜೀವನಕ್ಕೆ ನಿಜವಾದ ಅರ್ಥವನ್ನು ನೀಡುತ್ತದೆ. ವ್ಯಕ್ತಿಯ ನಿಜವಾದ ಸೌಂದರ್ಯವು ಬಾಹ್ಯ ರೂಪದಲ್ಲಲ್ಲ, ಉತ್ತಮ ಗುಣಗಳಲ್ಲಿ ಅಡಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್‌ಇಎಸ್) ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು (ಎ.ಟಿ.ಎನ್.ಸಿ.) ವತಿಯಿಂದ ಬುಧವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಸಮಗ್ರ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ಬಿಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸದ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕೌಶಲ್ಯಾಧಾರಿತ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು. ಪ್ರತಿಭೆ ಮತ್ತು ಕೌಶಲ್ಯಗಳನ್ನು ಬೆಳೆಸಲು ನಿರಂತರ ಅಭ್ಯಾಸ ಮತ್ತು ಚಿಂತನೆ ಅಗತ್ಯವಾಗಿದ್ದು, ಸಮಾಜದೊಂದಿಗೆ ಬೆರೆತು ಬದುಕುವ ಗುಣವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
Also read>> ವೈಯಕ್ತಿಕ ಬದುಕಿನ ಜೊತೆಗೆ ರಾಷ್ಟ್ರ ಸೇವೆಯ ಮನೋಭಾವ ಬೆಳೆಸಿಕೊಳ್ಳಿ: ಸಂಸದ ರಾಘವೇಂದ್ರ
ಆಧುನಿಕ ಯುಗದಲ್ಲಿ ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಉತ್ತಮ ಸಂಸ್ಕಾರ ಮತ್ತು ಕುಟುಂಬ ಮೌಲ್ಯಗಳಿಗೆ ಆದ್ಯತೆ ನೀಡಿದಾಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ. ಮಾತೃಭಾಷೆ, ಸಂಸ್ಕೃತಿ ಮತ್ತು ಪ್ರಕೃತಿಯ ಬಗ್ಗೆ ಕಾಳಜಿ ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವ್ಯಕ್ತಿಯ ಇರುವಿಕೆಯಿಂದ ಸುತ್ತಮುತ್ತಲಿನ ವಾತಾವರಣದಲ್ಲಿ ಸಂತೋಷ ಮೂಡಬೇಕು. ಅಂತಹ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಭಾಷಾ ಪ್ರೌಢಿಮೆಗೆ ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ಆಚಾರ್ಯ ತುಳಸಿ ಹೆಸರಿನ ಹಿಂದಿದೆ ಶಿಕ್ಷಣ ಸೇವೆಯ ಸ್ಮರಣೆ
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಆಚಾರ್ಯ ತುಳಸಿ ಕಾಲೇಜು ಮೌಲ್ಯಾಧಾರಿತ ಶಿಕ್ಷಣದ ಸಮೃದ್ಧ ಪರಂಪರೆಯನ್ನು ಹೊಂದಿದೆ. ಜೈನ ಸಂತ ಆಚಾರ್ಯ ತುಳಸಿ ಅವರು ಮಲೆನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎನ್‌ಇಎಸ್ ಸಂಸ್ಥೆಯ ಶಿಕ್ಷಣ ಸೇವೆಯನ್ನು ಮೆಚ್ಚಿ ಸುಮಾರು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಅವರ ಶಿಕ್ಷಣ ಸೇವೆ ಮತ್ತು ಉದಾರ ಮನೋಭಾವದ ಸ್ಮರಣಾರ್ಥ ಕಾಲೇಜಿಗೆ ‘ಆಚಾರ್ಯ ತುಳಸಿ ಕಾಲೇಜು’ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.
ಕಾಲೇಜಿನಲ್ಲಿ ಸಹಪಾಠಿ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಪರಸ್ಪರ ಕಲಿಕೆಯ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಈ ವಿಧಾನದಿಂದ ಉತ್ತಮ ಶೈಕ್ಷಣಿಕ ಫಲಿತಾಂಶಗಳ ಜೊತೆಗೆ ಸಮಾಜಮುಖಿ ವ್ಯಕ್ತಿತ್ವಗಳನ್ನು ರೂಪಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳದೆ ಕೇವಲ ಪದವಿ ಪಡೆದರೆ ನಿರೀಕ್ಷೆ ಮತ್ತು ವಾಸ್ತವದ ನಡುವೆ ಅಂತರ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.
ಜ್ಞಾನ ಮತ್ತು ಕೌಶಲ್ಯವೇ ನಿಜವಾದ ಸಂಪತ್ತು
ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರಶಾಂತ್ ನಾಯಕ್ ಮಾತನಾಡಿ, ಜ್ಞಾನ ಮತ್ತು ಕೌಶಲ್ಯವೇ ವ್ಯಕ್ತಿಯ ನಿಜವಾದ ಸಂಪತ್ತು. ಅಂಕಗಳು ಜೀವನದ ಒಂದು ಭಾಗ ಮಾತ್ರವಾಗಿದ್ದು, ಪ್ರೀತಿ, ವಿಶ್ವಾಸ, ಸಂಸ್ಕೃತಿ ಮತ್ತು ಮಾನವೀಯತೆ ಇಲ್ಲದ ಶಿಕ್ಷಣ ಅಪೂರ್ಣವಾಗಿದೆ. ಉತ್ತಮ ವ್ಯಕ್ತಿತ್ವ, ಜ್ಞಾನ ಮತ್ತು ಕೌಶಲ್ಯಗಳಿಂದಲೇ ಜೀವನದಲ್ಲಿ ನಿಜವಾದ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.
ಮೊಬೈಲ್ ರಹಿತ ದಿನ ಆಚರಿಸಿ: ಪ್ರಶಾಂತ್ ನಾಯಕ್
ಸಂಬಂಧಗಳಿಗೆ ಮೀಸಲಾದ ವಿಶೇಷ ದಿನಾಚರಣೆಗಳು ಕೇವಲ ಔಪಚಾರಿಕತೆಗೆ ಸೀಮಿತವಾಗಬಾರದು. ಸಂಬಂಧಗಳನ್ನು ಗೌರವಿಸುವುದು ಜೀವನದ ನಿತ್ಯೋತ್ಸವವಾಗಬೇಕು. ಕಾಲೇಜುಗಳಲ್ಲಿ ಒಂದು ದಿನ ‘ಮೊಬೈಲ್ ರಹಿತ ದಿನ’ ಆಚರಿಸಿದರೆ ವಿದ್ಯಾರ್ಥಿಗಳ ಮನಸ್ಸು ಉತ್ಸಾಹಭರಿತವಾಗಿದ್ದು, ಉತ್ತಮ ನಿದ್ರೆ ಹಾಗೂ ಮಾನವೀಯ ಸಂಬಂಧಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಪ್ರಾಧ್ಯಾಪಕ ಪ್ರಶಾಂತ್ ನಾಯಕ್ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪಿ.ಆರ್. ಮಮತಾ ವಹಿಸಿದ್ದರು. ವಿಶೇಷಾಧಿಕಾರಿ ಡಾ. ಆರ್.ಎಂ. ಜಗದೀಶ್, ಐಕ್ಯೂಎಸಿ ಸಂಚಾಲಕಿ ಕೆ. ಅನುಪಮ ಹಾಗೂ ವಿವಿಧ ವಿದ್ಯಾರ್ಥಿ ವೇದಿಕೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ವಿವಿಧ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಹಾಗೂ ಚಾರ್ಟೆಡ್ ಅಕೌಂಟೆಂಟ್ (ಸಿಎ) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







